ಗುರುಪುರ : ಸೇವಾ ಬ್ರಿಗೇಡ್ ಗುರುಪುರ ಇದರ ಆಶ್ರಯದಲ್ಲಿ ಗುರುವಾರ ಗುರುಪುರದ ಹಿಂದೂ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ `ಆಟಿಡೊಂಜಿ ದಿನ’ ಕಾರ್ಯಕ್ರಮ ಜರುಗಿತು.ಜಾನಪದ ಆಟಗಳಿಗಿಂತ ಮುಂಚೆ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಉದ್ಯಮಿ ಯಶವಂತ ಕೋಟ್ಯಾನ್ ಮಾತನಾಡುತ್ತ, “ತುಳುನಾಡಿಗೆ ಆಟಿ ವಿಶೇಷ ತಿಂಗಳು. ಇದರ ಮಹತ್ವ ಇಂದಿನ ಪೀಳಿಗೆಗೆ ತಿಳಿದಿಲ್ಲ. ಕೃಷಿ ಪ್ರಧಾನವಾದ ತುಳುನಾಡಿನಲ್ಲಿ, ಈ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ಬಳಿಕ, ತುಳುವರು ತುಳು ಪ್ರಧಾನವಾದ ತಿಂಡಿ-ತಿನಸು, ಆಟ-ಆಯನಗಳಿಗೆ ಆದ್ಯತೆ ನೀಡುತ್ತಾರೆ. ಆಧುನಿಕ ವಾಟ್ಸಪ್ ಯುಗದಲ್ಲಿ ತೇಲಾಡುವ ನಮ್ಮ ಮಕ್ಕಳಿಗೆ ಇದೆಲ್ಲ ಗೊತ್ತೇ ಇಲ್ಲ. ಈ ನಿಟ್ಟಿನಲ್ಲಿ ನಮ್ಮ ಆಚರಣೆ ಮತ್ತು ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವಂತಹ ಈ ಕಾರ್ಯಕ್ರಮ ನಿಜಕ್ಕೂ ಸ್ಮರಣೀಯ” ಎಂದರು.
“ನಮ್ಮ ಮಕ್ಕಳಿಗೆ ಚೆನ್ನಮಣೆ, ತೆಂಗಿನಕಾಯಿ ಕಟ್ಟುವಿಕೆಯಂತಹ ಜಾನಪದೀಯ ಆಟಗಳು ಅಥವಾ ತೇವುದ(ಕೆಸು) ತೇಟ್ಲ, ತಜಂಕ್ ಎಂದರೆ ಗೊತ್ತಿಲ್ಲ. ಇಂತಹ `ಆಟಿಡೊಂಜಿ ದಿನ’ ಕಾರ್ಯಕ್ರಮಗಳ ಮೂಲಕ ನಮ್ಮ ಮಕ್ಕಳು ತುಳುನಾಡಿನ ಆಚರಣೆ, ಸಂಸ್ಕøತಿ ತಿಳಿಯುವಂತಾಗುತ್ತದೆ ಅಥವಾ ಅವುಗಳ ಸ್ವಾದ ಸವಿಯುವಂತಾಗುತ್ತದೆ” ಎಂದವರು ಹೇಳಿದರು.ನಾವೀಗ ಮಾರುಕಟ್ಟೆಯಿಂದ ದುಬಾರಿ ಹಣ ಕೊಟ್ಟು ತರಕಾರಿ ತರುತ್ತೇವೆ. ನಮ್ಮ ಸುತ್ತಮುತ್ತಿಲ ಅಲ್ಪಸ್ವಲ್ಪ ಜಾಗದಲ್ಲಿ ತರಕಾರಿ ಬೆಳೆಸಿದರೆ ಅಥವಾ ಕೈಗೆಟಕುವ ಸೊಪ್ಪು ತರಕಾರಿ ಬಳಸಿಕೊಂಡರೆ, ಆರೋಗ್ಯವನ್ನೂ ಉತ್ತಮವಾಗಿಸಿಟ್ಟುಕೊಳ್ಳಬಹುದು ಎಂದ ಶಿಕ್ಷಕ ಮಹಾಲಿಂಗ, ಶಾಲಾ ಮಕ್ಕಳಿಗೆ ಲಭ್ಯವಿರುವ ಸರ್ಕಾರಿ ಬಸ್ಸುಗಳ ಉಚಿತ ಪಾಸ್ ವಿಚಾರದಲ್ಲಿ ಮಾಹಿತಿ ನೀಡಿದರು. ಸೇವಾ ಬ್ರಿಗೇಡಿನ ಗೌರವಾಧ್ಯಕ್ಷ ಪುರಂದರ ಮಲ್ಲಿ ಉಪಸ್ಥಿತರಿದ್ದರು.
ಸೇವಾ ಬ್ರಿಗೇಡ್ ಬಗ್ಗೆ ರತನ್ ಜಿ ಗುರುಪುರ ಮಾಹಿತಿ ನೀಡಿದರು. ಸೇವಾ ಬ್ರಿಗೇಡ್ ಸಾಮಾಜಿಕ ಸೇವಾ ಕಳಕಳಿಯುಳ್ಳ ಒಂದು ಸಂಘಟನೆಯಾಗಿದ್ದು, ಇದು ಕಳೆದ ವರ್ಷ ಗುರುಪುರದಲ್ಲಿ ಸಾರ್ವಜನಿಕ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದೆ. ಸಂಸ್ಥೆಯು ಪತಂಜಲಿ ಯೋಗ ಸಂಸ್ಥೆಯ ಜೊತೆಗೂಡಿ ಕಳೆದ 75 ದಿನಗಳಿಂದ ಇಲ್ಲಿ ಯೋಗ ಶಿಬಿರ ನಡೆಸುತ್ತಿದೆ. ಆಟಿ ತಿಂಗಳ ಮಹತ್ವದ ಬಗ್ಗೆ ನಮ್ಮವರಿಗೆ, ಮುಖ್ಯವಾಗಿ ಎಳೆಯರಿಗೆ ತಿಳಿಸಿ ಹೇಳುವ ಉದ್ದೇಶದಿಂದ ಬ್ರಿಗೇಡ್ ಈ ಕಾರ್ಯಕ್ರಮ ಆಯೋಜಿಸಿದೆ. ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಸುತ್ತಮುತ್ತ ಲಭ್ಯವಿರುವ ಸೊಪ್ಪು, ತರಕಾರಿಗಳ ಸ್ವಾದಭರಿತ ಪಲ್ಯ, ತಿಂಡಿ-ತಿನಸು ಮಾಡುತ್ತಿದ್ದರು. ಈಗ ಅವೆಲ್ಲ ಮಾಯವಾಗಿ, ಅವುಗಳ ಸ್ಥಾನವನ್ನು ಬರ್ಗರ್, ಫಿಜಾ ಮೊದಲಾದ ಆರೋಗ್ಯಕ್ಕೆ ಹಾನಿಕಾರ ಸೊತ್ತುಗಳು ಆವರಿಸಿವೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದಲೂ ಆಟಿಯಲ್ಲಿ ನಾವು ಸೇವಿಸಬಹುದಾದ ಜನಪದೀಯ ತಿಂಡಿ-ತಿನಸುಗಳು ಮಹತ್ವದ್ದೆನಿಸಿವೆ ಎಂದವರು ವಿವರಿಸಿದರು.

ಅತಿಥಿಗಳಿಗೆ ಬೆಲ್ಲ ಮತ್ತು ನೀರಿನ ಸತ್ಕಾರ ಕಾದಿತ್ತು. ವಕೀಲ ಜಯಪ್ರಕಾಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು. ನಳಿನಿ ಶೆಟ್ಟಿ, ಶ್ಯಾಮರಾವ್ ಆಚಾರ್ಯ, ರಮಾನಂದ ಶೆಟ್ಟಿ, ಕೃಷ್ಣ ಸಾಲ್ಯಾನ್, ಗಿರೀಶ್ ಮೊದಲಾದವರು ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ನಿರ್ವಹಿಸಿದರು.
* ಆಟಿಡೊಂಜಿ ದಿನದಸಂಭ್ರಮದಲ್ಲಿ ಏನೇನಿತ್ತು ?
ತೇವುದ(ಕೆಸು) ತೇಟ್ಲ-ಗಸಿ, ಸೌತೆಯ ಚಟ್ನಿ(ಸೌತೆ ಚಟ್ನಿ), ತಿಮರೆದ(ಒಂದೆಲಗ) ಚಟ್ನಿ, ಚಲ್ಲಂಗಾಯಿ ಚಟ್ನಿ, ಕುಕ್ಕದ ಚಟ್ನಿ, ಉದ್ದು ಮತ್ತು ಉರುಳಿ ಚಟ್ನಿ, ಕಂಚಲ ಚಟ್ನಿ, ತಜಂಕ್ ಸುಕ್ಕ(ಸೊಪ್ಪು ಪಲ್ಯ), ಉಪ್ಪಡ್ ಪಚ್ಚಿರ್, ಪತ್ರೊಡೆ, ಮಾವಿನ ಉಪ್ಪಿನಕಾಯಿ, ನುಗ್ಗೆ ಸುಕ್ಕ, ಕಡ್ಲೆ ಬಲ್ಯಾರ್, ಸಾರ್ನಡ್ಡೆ, ಗುಳಿಯಪ್ಪ, ಮೂಡೆ, ಮಂಜಲ್ದ ಇರೆತ್ತ ಗಟ್ಟಿ, ಪೆಲಕಾಯಿ ಗಟ್ಟಿ, ಕುಡತ್ತ ಸಾರ್, ಪಾಯಸ, ಗಂಜಿ ಊಟ…ಹೀಗೆ ಪಲ್ಯ-ತಿಂಡಿ-ತಿನಸುಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ.
* ಆಟಿದ ಆಟೊಲು
ಇದೇ ವೇಳೆ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಆಡುವ ಕೆಲವು ಆಟಗಳ ಪ್ರದರ್ಶನವೂ ನಡೆಯಿತು. ತೆಂಗಿನಕಾಯಿ ಕಟ್ಟುವಿಕೆ, ಮೂಡೆ-ಗುಂಡ ಕಟ್ಟುವಿಕೆ, ಚೆನ್ನೆಮಣೆ ಆಟ, ಕೋಳಿ ಅಂಕ, ಮಡಕೆ ಒಡೆಯುವುದು, ತುಳು ಪದ್ಯ ಹಾಡುವುದು…. ಸೇರಿದ್ದ ನೂರಾರು ಮಕ್ಕಳು ಮತ್ತು ಹಿರಿಯರಿಗೆ ಮುದ ನೀಡಿತು.
