ಬೆಂಗಳೂರು, ಆ. ೩ – ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಕಚೇರಿ, ನಿವಾಸ ಹಾಗೂ ಆಪ್ತರು ಹಾಗೂ ಸಂಬಂಧಿಕರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದೂ ಕೂಡ ಮುಂದುವರೆಸಿದ್ದು ದಾಳಿಯನ್ನು ತೀವ್ರಗೊಳಿಸಿದ್ದು, ಅಪಾರ ಪ್ರಮಾಣದ ನಗದು ಹಾಗೂ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಮಧ್ಯಪ್ರವೇಶಿಸುವ ಎಲ್ಲಾ ಸಾಧ್ಯತೆಗಳಿವೆ.
ಶಿವಕುಮಾರ್ ಮನೆ ಮೇಲೆ ಇಂದೂ ದಾಳಿ ಮುಂದುವರಿಕೆ
ಅಪಾರ ಪ್ರಮಾಣದ ನಗದು, ಆಸ್ತಿಪಾಸ್ತಿಗಳ ಪತ್ತೆ
ಜಾರಿ ನಿರ್ದೇಶನಾಲಯ ರಂಗಪ್ರವೇಶಿಸುವ ಸಾಧ್ಯತೆ
ನಿಷೇಧಿತ 1000 ಹಾಗೂ 500 ಮುಖಬೆಲೆಯ ನೋಟು ಪತ್ತೆ
ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ ಡಿ.ಕೆ. ಶಿವಕುಮಾರ್
ಇಂಧನ ಸಚಿವರಿಗೆ ಐಟಿ ಕಂಟಕ
ನಿನ್ನೆ ಬೆಳಿಗ್ಗೆ 6.30ಕ್ಕೆ ಆರಂಭವಾದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮತ್ತು ಶೋಧ ಕಾರ್ಯ ರಾತ್ರಿಯಿಡೀ ನಡೆದು, ಇಂದು ಬೆಳಿಗ್ಗೆಯೂ ಮುಂದುವರೆದಿದ್ದು, ಹಲವು ಆಸ್ತಿ-ಪಾಸ್ತಿಗಳ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಅಪಾರ ಪ್ರಮಾಣದ ನಗದನ್ನೂ ವಶಕ್ಕೆ ತೆಗೆದುಕೊಂಡು ಮಹಜರು ಮಾಡುತ್ತಿದ್ದಾರೆ. ದಾಳಿ ಮುಂದುವರೆದಿರುವ ಎಲ್ಲಾ ಮನೆ ಹಾಗೂ ಕಚೇರಿಗಳಲ್ಲಿನ ಜನರನ್ನು ಹೊರಹೋಗದಂತೆ ಗೃಹ ಬಂಧನದಲ್ಲಿ ಇರಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಇರುವ ಆಸ್ತಿ-ಪಾಸ್ತಿಗಳ ದಾಖಲೆ ಪರಿಶೀಲನೆ ಮುಂದುವರೆದಿದೆ. ಇದಲ್ಲದೆ, ಮೈಸೂರಿನಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಮಾವ ತಿಮ್ಮಯ್ಯ ಹಾಗೂ ಆಪ್ತ ಜ್ಯೋತಿಷಿ ಧ್ವಾರಕಾನಾಥ್ ಅವರ ಬೆಂಗಳೂರಿನ ಆರ್ಟಿನಗರದ ಮನೆಯ ಮೇಲೆ ಇಂದು ದಾಳಿ ಮುಂದುವರೆದಿದ್ದು, ಮನೆಯಿಂದ ಯಾರೂ ಹೊರಹೋಗದಂತೆ ಅಧಿಕಾರಿಗಳು ಕಟ್ಟಪ್ಪಣೆ ಹೊರಡಿಸಿದ್ದಾರೆ.
ಬೆಂಗಳೂರು, ಮುಂಬೈ, ಮೈಸೂರು, ದೆಹಲಿ ಸೇರಿದಂತೆ 60 ಸ್ಥಳಗಳಲ್ಲಿ ನೂರಾರು ಅಧಿಕಾರಿಗಳ ತಂಡ ಶೋಧ ಕಾರ್ಯದಲ್ಲಿ ನಿನ್ನೆಯಿಂದ ನಿರತರಾಗಿದ್ದು, ಪರಿಶೀಲಿಸಿದಷ್ಟು ಆಸ್ತಿ-ಪಾಸ್ತಿಗಳು ಹಾಗೂ ನಗದು ದೊರೆಯುತ್ತಿದೆ. ಅಲ್ಲದೆ, ಕೆಲ ಲಾಕರ್ಗಳ ಕೋಡ್ ವರ್ಡ್ಗಳ ಬಗ್ಗೆ ಮಾಹಿತಿ ನೀಡಲು ಡಿ.ಕೆ. ಶಿವಕುಮಾರ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಆದಾಯ ತೆರಿಗೆ ಇಲಾಖೆ ಪತ್ರ ಬರೆದಿದ್ದು, ಇಂದು ಮಧ್ಯಾಹ್ನದ ಒಳಗೆ ಅವರೂ ಕೂಡ ರಂಗಪ್ರವೇಶಿಸುವ ಸಾಧ್ಯತೆ ಇದೆ.
ಆದಾಯ ತೆರಿಗೆ ಇಲಾಖೆ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದು, ಬಂಧನದಿಂದ ಪಾರಾಗಲು ಡಿ.ಕೆ. ಶಿವಕುಮಾರ್ ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ, ಹೊರ ರಾಜ್ಯಗಳಲ್ಲದೆ, ವಿದೇಶಗಳಲ್ಲೂ ಶಿವಕುಮಾರ್ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ. ಇದರ ಜತೆಗೆ ಅಪಾರ ಪ್ರಮಾಣದ ಅಕ್ರಮ ಆಸ್ತಿ, ನಗದು, ಚಿನ್ನಾಭರಣ, ಹೂಡಿಕೆ ದಾಖಲೆಗಳು ಹಾಗೂ ಬ್ಯಾಂಕ್ ಠೇವಣಿ ಸೇರಿದಂತೆ ಮತ್ತಿತರ ದಾಖಲೆಗಳನ್ನು ನಿನ್ನೆಯಿಂದಲೇ ಪರಿಶೀಲಿಸುವ ಕಾರ್ಯ ಇಂದು ಮುಂದುವರೆದಿದ್ದು, ಸಿಗುತ್ತಿರುವ ದಾಖಲೆ ಪತ್ರಗಳು, ಮಾಹಿತಿಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಬೆಚ್ಚಿ ಬೀಳುವಂತಾಗಿದೆ.
ಈ ನಡುವೆ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿರುವ ಗುಜರಾತ್ ಶಾಸಕರು, ಶಿವಕುಮಾರ್ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿರುವುದರಿಂದ ಕಂಗಾಲಾಗಿದ್ದು, ಬೆಂಗಳೂರು ಸುರಕ್ಷಿತವಲ್ಲ ಎನ್ನುವ ಮನಸ್ಥಿತಿಗೆ ಬಂದಿದ್ದು, ತವರಿಗೆ ಅಥವಾ ಇತರೆ ಸುರಕ್ಷಿತ ಸ್ಥಳಕ್ಕೆ ಮರಳುವ ಚಿಂತನೆಯಲ್ಲಿದ್ದಾರೆ.
ನಿಷೇಧಿತ ನೋಟು ಪತ್ತೆ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಡಿ.ಕೆ. ಶಿವಕುಮಾರ್ ಮಾಲೀಕತ್ವದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿ ನಿಷೇಧಿತ 500 ಹಾಗೂ 1000 ಮುಖಬೆಲೆಯ ನೋಟುಗಳು ಪತ್ತೆಯಾಗಿರುವುದು ಶಿವಕುಮಾರ್ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈಗಾಗಿ ದಾಳಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇನ್ನಷ್ಟು ಚುರುಕುಗೊಳಿಸಿದ್ದು, ನಿಷೇಧಿತ ನೋಟು ಪತ್ತೆ ಹಾಗೂ ಅಕ್ರಮ ಆಸ್ತಿ-ಪಾಸ್ತಿ ಹಾಗೂ ಹಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಲಾಕರ್ ತೆರೆಯಲು ಯತ್ನ
ಸದಾಶಿವನಗರದ ನಿವಾಸದಲ್ಲಿರುವ ಹಲವು ಲಾಕರ್ಗಳನ್ನು ತೆರೆಯಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಕಲು ಕೀ ಮಾಡುವ ವ್ಯಕ್ತಿಯನ್ನು ಕರೆತಂದು ಲಾಕರ್ ತೆಗೆಯುವ ಪ್ರಯತ್ನ ನಡೆಸಿದ್ದಾರೆ. ಲಾಕರ್ನಲ್ಲಿ ಅಪಾರ ಪ್ರಮಾಣದ ನಗದು, ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳು ಇರುವ ಎಲ್ಲಾ ಸಾಧ್ಯತೆಗಳು ಇದ್ದು, ಲಾಕರ್ ತೆರೆದರೆ ಶಿವಕುಮಾರ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಸಾಧ್ಯತೆಗಳಿವೆ.
ಬಿಗಿ ಭದ್ರತೆ
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸ, ಕಚೇರಿ ಸೇರಿದಂತೆ 60ಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆಗಳು ದಾಳಿಗೆ ಕೇಂದ್ರ ಮೀಸಲು ಪಡೆ ಸೇರಿದಂತೆ ರಾಜ್ಯದ ಪೊಲೀಸರು ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಒದಗಿಸಿದ್ದರು. ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಎಲ್ಲಾ ಕಡೆಗಳಲ್ಲೂ ಬಿಗಿ ಭದ್ರತೆ ಒದಗಿಸಲಾಗಿದ್ದು, ಕುಟುಂಬಸ್ತರನ್ನು ಬಿಟ್ಟು ಯಾರಿಗೂ ಅವಕಾಶ ನೀಡಿರಲಿಲ್ಲ. ಎಲ್ಲರ ಮೇಲೂ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಕಲ್ಪಿಸಿದ್ದರು.
ಶಸ್ತ್ರಸಜ್ಜಿತರಾಗಿದ್ದ ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಯಾರೊಬ್ಬರೂ ದಾಳಿಯ ಸ್ಥಳಗಳಿಗೆ ಬರದಂತೆ ಕಟ್ಟೆಚ್ಚರ ವಹಿಸಿದ್ದರು.
