ಉಪ್ಪಳ: ಪೈವಳಿಕೆ ಸಮೀಪದ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇ. 13 ರಂದು ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಫ್ರೌಢಶಾಲಾ ವಠಾರದಲ್ಲಿ ದಿ.ಕುರಿಯ ವಿಠಲ ಶಾಸ್ತ್ರಿ, ದಿ.ನೆಡ್ಲೆ ನರಸಿಂಹ ಭಟ್ ಹಾಗು ದಿ.ಕರುವೋಳು ದೇರಣ್ಣ ಶೆಟ್ಟಿ ಯವರ ಸಂಸ್ಮರಣೆ, ಸನ್ಮಾನ ಹಾಗು ಬಯಲಾಟ ಸಮಾರಂಭ ಏರ್ಪಡಿಸಲಾಗಿದೆ.
ಅಂದು ಅಪರಾಹ್ನ 2.30 ರಿಂದ ಆರಂಭಗೊಳ್ಳುವ ಸಮಾರಂಭದಲ್ಲಿ ಭರತಾಗಮನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.ಸಂಜೆ 5 ರಿಂದ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.ರಾತ್ರಿ 7 ರಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಘುರಾಮ ಶೆಟ್ಟಿ ಬಾಯಾರುರವರಿಗೆ ವಿಠಲ ಶಾಸ್ತ್ರಿ ಸ್ಮಾರಕ ಪ್ರಶಸ್ತಿ,ಹರಿನಾರಾಯಣ ಬೈಪಡಿತ್ತಾಯರಿಗೆ ನೆಡ್ಲೆ ನರಸಿಂಹ ಭಟ್ಟ್ ಪ್ರಶಸ್ತಿ ಹಾಗು ಮುಳಿಯ ಭೀಮ ಭಟ್ಟರಿಗೆ ದೇರಣ್ಣ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ನಿವೃತ್ತ ಪ್ರಾಂಶುಪಾಲ ಗುಂಡಿಲಗುತ್ತು ಶಂಕರ ಶೆಟ್ಟಿ ಸಂಸ್ಮರಣಾ ಭಾಷಣ ಮಾಡುವರು. ರಾತ್ರಿ 9 ರಿಂದ ಬಾಯಾರು ಶ್ರೀಪಂಚಲಿಂಗೇಶ್ವರ ಕಲಾವೃಂದದವರಿಂದ ಅತಿಕಾಯ ಕಾಳಗ ,11 ರಿಂದ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗರ ಪರವೂರ ಕಲಾವಿದರ ಕೂಡುವಿಕೆಯಲ್ಲಿ ಶಾಂಭವಿ ವಿಜಯ ಯಕ್ಷಗಾನ ಬಯಲಾಟಗಳು ಪ್ರದರ್ಶನಗೊಳ್ಳಲಿದೆ.

12MNG51
ಸನ್ಮಾನಿತರ ಪರಿಚಯ:
ರಘುರಾಮ ಶೆಟ್ಟಿ ಬಾಯಾರು(ವಿಠಲ ಶಾಸ್ತ್ರಿ ಸ್ಮಾರಕ ಪ್ರಶಸ್ತಿ):
ಹಿರಿಯ ತಲೆಮಾರಿನ ಸುಪ್ರಸಿದ್ದ ಸ್ತ್ರೀ ವೇಶಧಾರಿ ಪೈವಳಿಕೆ ಐತ್ತಪ್ಪ ಶೆಟ್ಟಿಯವರ ಸುಪುತ್ರರಾದ ಬಾಯಾರು ರಘುರಾಮ ಶೆಟ್ಟಿ, ಪ್ರಾಥಮಿಕ ಯಕ್ಷಗಾನಾಭ್ಯಾಸವನ್ನು ತಂದೆಯವರಿಂದ ಕರಗತವಾಗಿಸಿ, ಐದನೇ ತರಗತಿಯಲ್ಲೇ ಬಣ್ಣಹಚ್ಚಿದವರು.ತನ್ನ 14ನೇ ವಯಸ್ಸಲ್ಲಿ ಕರ್ನಾಟಕ ಮೇಳವನ್ನೆ ಸೇರಿಕೊಂಡು ಹಂತಹಂತವಾಗಿ ಅನುಭವ, ಅಭ್ಯಾಸಗಳಿಂದ ಸ್ತ್ರೀ ಹಾಗು ಪುರುಷ ಪಾತ್ರಗಳನ್ನು ಕನ್ನಡ ಮತ್ತು ತುಳುಇ ಭಾಷೆಗಳೆರಡರಲ್ಲೂ ಮಾಡಿ ಸೈ ಎನಿಸಿಕೊಂಡವರು.38 ವರ್ಷ ಕರ್ನಾಟಕ ಮೇಳವೊಂದರಲ್ಲೇ ದುಡಿದು,ಪ್ರಸ್ತುತ ಕಟೀಲು ಮೇಳದಲ್ಲಿ ಕಲಾ ಕೈಕಂರ್ಯ ನಿರ್ವಹಿಸುತ್ತಿರುವರು.
ಹರಿನಾರಾಯಣ ಬೈಪಡಿತ್ತಾಯ(ನೆಡ್ಲೆ ನರಸಿಂಹ ಭಟ್ ಪ್ರಶಸ್ತಿ):
ಐದು ದಶಕಗಳ ಸಾರ್ಥಕ ಮದ್ದಳೆವಾದಕರಾಗಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದವರು ಹರಿನಾರಾಯಣ ಬೈಪಡಿತ್ತಾಯರದು. ಕಲಾವಿದ ಸದಸ್ಯರ ಸಂದೋಹವನ್ನೇ ಹೊಂದಿದ ಬೈಪಡಿತ್ತಾಯ ಬೀಡು ಮನೆತನ ಕಲಾ ಪ್ರೇಮದ ಸಂಕೇತ.ಏಳನೇ ತರಗತಿಯ ಬಳಿಕ ಯಕ್ಷಗಾನಾಸಕ್ತರಾಗಿ ನೆಡ್ಲೆ ನರಸಿಂಹ ಭಟ್ ರವರಿಂದ ಪ್ರಾಥಮಿಕ ಜ್ಞಾನ ಪಡೆದರು.ಕುಂಡಾವು, ಧರ್ಮಸ್ಥಳ,ಕೊಲ್ಲೂರು,ಕೂಡ್ಲು ಮೊದಲಾದ ಮೇಳಗಳಲ್ಲಿ ತಿರುಗಾಟ ಮಾಡಿರುವ ಬೈಪಡಿತ್ತಾಯರು, ದಿಗ್ಗಜರಾದ ಮಂಡೆಚ್ಚ ಭಾಗವತರು,ಅಗರಿ, ಬಲಿಪ, ಬಲ್ಲಾಳರೇ ಮೊದಲಾದವರ ಒಡನಾಟದಿಂದ ಅನುಭವವನ್ನು ಹೆಚ್ಚಿಸಿಕೊಂಡರು.ಧರ್ಮಸ್ಥಳದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಗುರುಗಳಾಗಿ ಸೇವೆಸಲ್ಲಿಸಿ ಅಸಂಖ್ಯ ಶಿಷ್ಯಂದಿರನ್ನು ತಯಾರಿಗೊಳಿಸಿದ್ದಾರೆ.ಖ್ಯಾತ ಮಹಿಳಾ ಭಾಗವತೆ ಲೀಲಾವತಿ ಬೈಪಡಿತ್ತಾಯರು ಇವರ ಸಹಧರ್ಮಿಣಿಯಾಗಿ ಕಲಾ ಜೀವನಕ್ಕೆ ಸಾಥ್ ನೀಡಿರುವುದು ವಿಶೇಷ.
ಮುಳಿಯಾಲ ಭೀಮ ಭಟ್(ಕರುವೋಳು ದೇರಣ್ಣ ಶೆಟ್ಟಿ ಪ್ರಶಸ್ತಿ):
ಯಕ್ಷಗಾನದ ಪ್ರಸಿದ್ದ ವೇಷಧಾರಿ ಮುಳಿಯಾಲ ಕೇಶವ ಭಟ್ ರವರ ಸುಪುತ್ರರಾದ ಮುಳಿಯಾಲ ಭೀಮ ಭಟ್ ಹತ್ತನೇ ತರಗತಿ ವಿದ್ಯಾಭ್ಯಾಸದ ಬಳಿಕ ತಂದೆಯವರಂತೆ ವೇಶಧಾರಿಯಾಗುವ ಕನಸುಹೊತ್ತು ಕುರಿಯ ವಿಠಲ ಶಾಸ್ತ್ರಿಗಳಿಂದ ಅಭ್ಯಸಿಸಿ ಧರ್ಮಸ್ಥಳ ಮೇಳದಲ್ಲಿ ಮೊದಲು ಗೆಜ್ಜೆಕಟ್ಟಿದವರು. ಬಳಿಕ ಕಟೀಲು, ಸುಂಕದಕಟ್ಟೆ ಮೊದಲಾದ ಮೇಳಗಳಲ್ಲಿ ಮೂರು ದಶಕಗಳಿಗೂ ಮಿಕ್ಕಿ ರಂಗದಲ್ಲಿ ವಿಶಿಷ್ಟ ಸಾಧನೆ ಮೆರೆದವರು. ಆಯಕಟ್ಟಿನ ಶರೀರ, ಗಮನ ಸೆಳೆಯುವ ಶಾರೀರ,ರಂಗ ತುಂಬುವ ಜಾಣ್ಮೆಯಿಂದ ಅಸಂಖ್ಯ ಕಲಾಭಿಮಾನಿಗಳನ್ನು ಹೊಂದಿದವರು.ಪ್ರಮೀಳೆ, ಶಶಿಪ್ರಭೆ,ಮೀನಾಕ್ಷಿ ಯಂತಹ ಪಾತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದವರು ಮುಳಿಯಾಲರು. ಅತಿಕಾಯ,ಕರ್ಣ, ಕಾರ್ತವೀರ್ಯ, ನಳ, ಅಯ್ಯಪ್ಪ ಮೊದಲಾದ ಪಾತ್ರಗಳಲ್ಲೂ ಇವರದು ಹೊಸ ಅವಿಷ್ಕಾರ, ಒಳನೋಟಗಳ ಪಾತ್ರಚಿತ್ರಣ ಮೂಡಿ ಬಂದಿರುವುದು ಇವರ ಜ್ಞಾನ, ಅನುಭವಗಳ ಸಂಕೇತ.

By suddi9

Leave a Reply

Your email address will not be published. Required fields are marked *