ಒಡಹುಟ್ಟಿದ ಅಣ್ಣನನ್ನೇ ಚಟ್ಟ ಹತ್ತಿಸಿ ನಾಟಕವಾಡಿದ ಕಿರಾತಕಿ,ಗೆಳೆಯನೊಂದಿಗೆ ಜೈಲು ಪಾಲು
ಕೊಣಾಜೆ:ಕಳೆದ ಅಕ್ಟೋಬರ್ ತಿಂಗಳಲ್ಲಿ ಕೊಣಾಜೆ ಪೊಲೀಸ್ ಠಾಣಾ ಕೂಗಳತೆಯ ದೂರದಲ್ಲೇ ಜಾಗಿಂಗ್ ಮಾಡುತ್ತಿದ್ದ ಕಾರ್ತಿಕ್‍ರಾಜ್‍ನನ್ನು ಕೊಲೆಗೈದ ಆರೋಪಿಗಳನ್ನು ಬಂಧಿಸುವಲ್ಲಿ ಎಸಿಪಿ ವೆಲೈಂಟೈನ್ ಡಿಸೋಜ ನೇತೃತ್ವದ ತಂಡ ಯಶಸ್ವಿಯಾಗಿದ್ದು, ಕಾರ್ತಿಕ್ ತಂಗಿಯೇ ತನ್ನ ಸ್ನೇಹಿತನೊಂದಿಗೆ ಸೇರಿ ಅಣ್ಣನನ್ನು ಕೊಲೆ ಮಾಡಿರುವುದು ಕೊಲೆ ಕೇಸಿಗೆ ವಿಲಕ್ಷಣ ಟ್ವಿಸ್ಟ್ ದೊರೆತಂತಾಗಿದೆ.
ಕೊಣಾಜೆ,ಪಜೀರು ಸುದರ್ಶನ ನಗರನಿವಾಸಿ ಬಿಜೆಪಿ ಮುಖಂಡ ಉಮೇಶ್ ಗಾಣಿಗ ಸುಪುತ್ರ ಮೃತ ಕಾರ್ತಿಕ್‍ರಾಜ್ ತಂಗಿ ಕಾವ್ಯ (26) ಆಕೆಯ ಸ್ನೇಹಿತ ಕುತ್ತಾರು ಸಂತೋಷ್‍ನಗರ ನಿವಾಸಿ ಗೌತಮ್ (26)ಮತ್ತು ಆತನ ಸಹೋದರನಾದ ಗೌರವ್(22) ಕಾರ್ತಿಕ್ ಹತ್ಯಾ ಪ್ರಕರಣದ ಬಂಧಿತ ಆರೋಪಿಗಳಾಗಿದ್ದಾರೆ.
ಕಾವ್ಯ ವಿವಾಹಿತೆಯಾಗಿದ್ದು ಈಕೆಯ ಗಂಡ ವಿದೇಶದಲ್ಲಿ ನೆಲೆಸಿದ್ದರೆನ್ನಲಾಗಿದೆ. ಕಾವ್ಯ ವಿವಾಹನಂತರವೂ ಪಜೀರಿನಲ್ಲಿರುವ ತಾಯಿ ಮನೆಯಲ್ಲೇ ನೆಲೆಸಿದ್ದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾಗಿದ್ದಳು. ಅದೇ ಆಸ್ಪತ್ರೆಯ ಮೆಡಿಕಲ್ ಸಿಬ್ಬಂದಿಯಾಗಿದ್ದ ಗೌತಮ್‍ನ ಜೊತೆ ಸಲುಗೆಯಿಂದಿದ್ದು ಇದನ್ನು ಆಕೆಯ ಅಣ್ಣ ಕಾರ್ತಿಕ್ ವಿರೋಧಿಸಿದ್ದನೆನ್ನಲಾಗಿದೆ. ಅಣ್ಣನನ್ನು ಮುಗಿಸಲು ಪ್ಲ್ಯಾನ್ ಮಾಡಿದ ಕಾವ್ಯ ಗೌತಮ್ಗೆ 5ಲಕ್ಷ ಸುಪಾರಿ ನೀಡಿದ್ದು, ಆರ್ಥಿಕ ಅಡಚಣೆಯಲ್ಲಿದ್ದ ಗೌತಮ್ ಮತ್ತು ಆತನ ಸಹೋದರ ಗೌರವ್ ಜೊತೆಗೂಡಿ ಅಕ್ಟೋಬರ್ 22ರ ಮುಂಜಾನೆ ಕೊಣಾಜೆ ಗಣೇಶ್ ಮಹಲ್ ಬಳಿ ಹೊಂಚುಹಾಕಿ ಕುಳಿತು ಜಾಗಿಂಗ್ ನಡೆಸಿಕೊಂಡು ಬರುತ್ತಿದ್ದ ಕಾರ್ತಿಕ್ ತಲೆಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ರಸ್ತೆ ನಡುವಲ್ಲೇ ರಕ್ತದ ಮಡುವಲ್ಲಿ ಬಿದ್ದಿದ್ದ ಕಾರ್ತಿಕ್‍ರಾಜನ್ನು ಪತ್ರಿಕೆ ಮಾರಾಟ ಮಾಡುವ ಹುಡುಗನೊಬ್ಬ ಕಂಡಿದ್ದು ಕೊಣಾಜೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದ.ಸ್ಥಳಕ್ಕಾಗಮಿಸಿದ ಪೊಲೀಸರು ಹಿಟ್ ಆಂಡ್ ರನ್ ಕೇಸೆಂದು ಗ್ರಹಿಸಿ ದೇರಳಕಟ್ಟೆಯ ಆಸ್ಪತ್ರೆಗೆ ಕಾರ್ತಿಕನ್ನು ದಾಖಲಿಸಿದ್ದರು.ಆಸ್ಪತ್ರೆಯಲ್ಲಿ ವಿಧಿ,ವಿಜ್ನಾನ ತಜ್ನರಿಂದ ಅದೊಂದು ಕೊಲೆಯತ್ನವೆಂದು ಪೊಲೀಸರಿಗೆ ಮನವರಿಕೆಯಾಗಿದ್ದು ಗಂಭೀರ ಗಾಯಗೊಂಡ ಕಾರ್ತಿಕ್ ಚಿಕಿತ್ಸೆಗೆ ಸ್ಪಂದಿಸದೆ ಮಾರನೇ ದಿವಸ ಸಾವನ್ನಪ್ಪಿದ್ದು ಕೊಣಾಜೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಕೊಲೆ ಆರೋಪಿಗಳ ಬಂಧನಕ್ಕೆ ನಡೆದಿತ್ತು ಪ್ರತಿಭಟನೆ:
ತಿಂಗಳುಗಳು ಉರುಳಿದರೂ ಕಾರ್ತಿಕ್‍ರಾಜ್ ಕೊಲೆ ಆರೋಪಿಗಳ ಬಂಧನ ನಡೆಯದೇ ಇರುವುದರ ವಿರುದ್ಧ ಸ್ಥಳೀಯ ಹಿಂದೂ ಸಂಘಟನೆಗಳು,ಬಿಜೆಪಿ ನಾಯಕರುಗಳು ಒಟ್ಟು ಸೇರಿ ಕೊಣಾಜೆ ಪೊಲೀಸ್ ಠಾಣಾ ಎದುರುಗಡೆ ಎರಡು ಬಾರಿ ಧರಣಿ ಕುಳಿತು ಪ್ರತಿಭಟನೆಯನ್ನೂ ನಡೆಸಿದ್ದರು.ಕಳೆದ ಮಾರ್ಚ್ ತಿಂಗಳಲ್ಲಿ ನಡೆದಂತಹ ಪ್ರತಿಭಟನೆಯಲ್ಲಿ ಠಾಣೆಗೆ ನುಗ್ಗಿ ಪ್ರತಿಭಟಿಸುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಇದೀಗ ಬರೋಬ್ಬರಿ ಆರು ತಿಂಗಳ ನಂತರ ಪೊಲೀಸರು ಮನೆಯೊಳಗೇ ಇದ್ದ ಹಂತಕಿ ಮತ್ತು ಆಕೆಯ ಸಹಚರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಎಲ್ಲರೆದುರು ನಾಟಕವಾಡಿ ಕಣ್ಣೀರಿಟ್ಟಿದ್ದ ಕಾವ್ಯ:
ಮೃತ ಕಾರ್ತಿಕ್‍ರಾಜ್ ಹತ್ಯಾ ಪ್ರಕರಣವು ರಾಜಕೀಯ ತಿರುವು ಪಡೆದು ಕಾರ್ತಿಕ್ ಮನೆಗೆ ರಾಜಕೀಯ ನಾಯಕರುಗಳಾದ ಬಿ.ಎಸ್ ಯಡಿಯೂರಪ್ಪ, ಸಂಸದ ನಳಿನ್,ಸಚಿವ ಖಾದರ್ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಈ ವೇಳೆ ಗಣ್ಯರೆದುರು ಯಾರಿಗೂ ಸಂಶಯ ಬಾರದಂತೆ ಕಾವ್ಯ ಮನಸೋ ಇಚ್ಚೆ ಅಳುತ್ತಾ ನಾಟಕವಾಡಿದ್ದಳು.ಕೊಣಾಜೆ ಠಾಣಾ ಎದುರಲ್ಲಿ ನಡೆದ ಪ್ರತಿಭಟನೆಯಲ್ಲೂ ಕಾವ್ಯ ಭಾಗವಹಿಸಿ ಅಣ್ಣನ ಭಾವಚಿತ್ರಕ್ಕೆ ಅಳುತ್ತಲೇ ಪುಷ್ಪಾರ್ಚನೆಗೈದು ಸಂಘಟನೆಯ ಮುಖಂಡರ ದಾರಿ ತಪ್ಪಿಸಿದ್ದಳು.ಏನೇ ನಾಟಕ ಮಾಡಿದರೂ ಕಾವ್ಯಳು ಹಾಕಿದ್ದ ಯೋಜನೆಯು ಫಲಫ್ರದವಾಗದೆ ಜೈಲು ಸೇರುವಂತಾಗಿದ್ದು ವಿಧಿ ಲಿಖಿತವಾಗಿದೆ.
ಮೆನೆಯೊಳಗಿನ ಹಂತಕಿಯನ್ನು ಬಂಧಿಸಲು ಆರು ತಿಂಗಳೇಕೆ?
ಕಾರ್ತಿಕ್‍ರಾಜ್ ಹತ್ಯೆಯಲ್ಲಿ ತಂಗಿಯ ಪಾತ್ರ ಇದೆ ಎನ್ನುವುದು ಪೊಲೀಸರಿಗೆ ಆರಂಭದಲ್ಲೇ ತಿಳಿದಿತ್ತೆನ್ನಲಾಗುತ್ತಿದ್ದು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆಗಳು ನಡೆದಿದ್ದರೂ ಸಹ ಮನೆಯೊಳಗಿನ ಹಂತಕಿಯನ್ನು ಬಂಧಿಸಲು ವೃತಾ ಆರು ತಿಂಗಳುಗಳನ್ನು ವ್ಯಯಿಸಿದ್ದು ಯಾಕೆನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.




