ಮಂಗಳೂರು: ಕರಾವಳಿ ಜಿಲ್ಲೆಗೆ ಪೂರಕವಾಗಿರುವ ಎತ್ತಿಹೊಳೆ ಯೋಜನೆಯನ್ನು ಶತಾಯ ಗತಾಯ ಹೋರಾಟ ಮಾಡಿಯಾದರೂ ನಿಲ್ಲಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು ರಾಜಿನಾಮೆ ಕೊಡುವುದಾಗಿ ಹೇಳಿದರೆ ಸರಕಾರ ಸ್ಪಂದಿಸಿ ಎತ್ತಿನಹೊಳೆ ಯೋಜನೆಯನ್ನು ತಡೆಯಬಹುದು ಎಂದು ಯೋಜನೆ ವಿರೋಧಿ ಹೋರಾಟಗಾರ, ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ.10ರಿಂದ ನಡೆಯುವ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಯಲ್ಲಿ ಎಲ್ಲರೂ ಕೈಜೋಡಿಸಿ ಯೋಜನೆ ವಿರುದ್ಧದ ಹೋರಾಟ ನಡೆಸಬೇಕಿದೆ ಎಂದು ವಿವರಿಸಿದರು.
ರಥಯಾತ್ರೆ: ಯಾತ್ರಾ ಸಮಿತಿ ಸಂಚಾಲಕ ಮೋನಪ್ಪ ಭಂಡಾರಿ ಮಾತನಾಡಿ, ರಥಯಾತ್ರೆಯನ್ನು ಗಂಗ ಸೇವಾ ಮಿಷನ್ ನ ಆನಂದ್ ಸ್ವರೂಪ್, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸುವರು. ಕಾನೂನು ಹೋರಾಟಗಾರ ಕಿಶೋರ್ ಹಾಸನ ಎತ್ತಿನ ಹೊಳೆ ಉಗಮ ಪ್ರದೇಶದ ನೀರನ್ನು ತಂದು ಕಳಸಕ್ಕೆ ಹಾಕಿ ಯಾತ್ರಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಡಿ.10ರಂದು ಬೆಳಗ್ಗೆ 9ಗಂಟೆಗೆ ಸುಬ್ರಹ್ಮಣ್ಯದಲ್ಲಿ ಯಾತ್ರೆ ಉದ್ಘಾಟನೆಯಾಗಲಿದ್ದು, ಸಂಜೆ ಉಜಿರೆಯಲ್ಲಿ ವಾಸ್ತವ್ಯ ಹೂಡಲಿದೆ. ಸಂಜೆ 6 ಗಂಟೆಗೆ ಕಣ್ಣೂರಿನ ಮಸೀದಿ ಆಡಳಿತ ಮಂಡಳಿ ಯಾತ್ರೆಯನ್ನು ಸ್ವಾಗತಿಸಲಿದ್ದು, ಬಳಿಕ ಮಿಲಾಗ್ರಿಸ್ ಚರ್ಚೆಗೆ ತರಳಿ ಬಳಿಕ ಕದ್ರಿಯಲ್ಲಿ ಸಭೆ ನಡೆಯಲಿದೆ.
ಡಿ.12ರಂದು ಕದ್ರಿಯಿಂದ ಹೊರಟು ಮೂಲ್ಕಿ, ಮೂಲಕ ಕಟೀಲು ದೇಗುಲಕ್ಕೆ ತೆರಳಿ ಕಲಶದಲ್ಲಿ ತಂದ ಪಂಚನದಿಗಳ ತೀರ್ಥ ದೇವಿಗೆ ಅಭಿಷೇಕ ಮಾಡಲಾಗುವುದು ಎಂದು ತಿಳಿಸಿದರು.

