ಸುರತ್ಕಲ್: ಅರೆಸ್ಟ್ ಮಾಡಲು ಬಂದಿದ್ದ ಪಣಂಬೂರು ಪೊಲೀಸ್ ಠಾಣೆಯ ಎಸೈ ಭಾರತಿ ಹಾಗೂ ಮೂವರು ಸಿಬ್ಬಂದಿಯ ಮೇಲೆ ರೌಡಿ ಶೀಟರ್ ಓರ್ವ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಮಂಗಳವಾರ ರಾತ್ರಿ 10ರ ಸುಮಾರಿಗೆ ಜೋಕಟ್ಟೆಯಲ್ಲಿ ನಡೆದಿದೆ.
ಜೋಕಟ್ಟೆ ನಿವಾಸಿ ಅಬ್ದುಲ್ ಸಲಾಂ ಯಾನೆ ಪಟ್ಟೋಡಿ ಸಲಾಂ ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ.  ಘಟನೆಯಲ್ಲಿ ಈತನಿಗೂ ಗಾಯವಾಗಿದೆ.

sur2

ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಸಲಾಂನನ್ನು ಬಂಧಿಸಲು ಎಸೈ ಭಾರತಿಯವರ ನೇತೃತ್ವದಲ್ಲಿ ಸಿಬ್ಬಂದಿಯಾದ ಚಂದ್ರಹಾಸ್ ಆಳ್ವಾ, ಕುಶಲ ಮಣಿಯಾಣಿ, ಸುರೇಶ್ ಮತ್ತು ರಾಧಾಕಷ್ಣ ಎಂಬವರು ತೆರಳಿದ್ದರು.

sur1

ಜೋಕಟ್ಟೆಯ ಈದ್ಗಾ ಮಸೀದಿ ಬಳಿ ಇರುವ ಸಲಾಂ ಮನೆಯ ಬಳಿ ಪೊಲೀಸ್ ಜೀಪ್ ನಿಲ್ಲುತ್ತಿದ್ದಂತೆಯೇ ಸಲಾಂ ಅಲ್ಲಿಂದ ಓಟ ಕಿತ್ತಿದ್ದ. ಪೊಲೀಸರು ಅದೇ ವೇಗದಲ್ಲಿ ಆತನ ಬೆನ್ನಟ್ಟಿದ್ದರು. ಸ್ವಲ್ಪ ದೂರ ಓಡುವಷ್ಟರಲ್ಲಿ ಪೊಲೀಸರು ಆತನನ್ನು ಸುತ್ತುವರಿದಿದ್ದರು. ನನ್ನನ್ನು ಅರೆಸ್ಟ್ ಮಾಡಲು ಬಂದರೆ ನಿಮಗೆ ಸುಮ್ಮನೆ ಬಿಡುವುದಿಲ್ಲ ಎಂದು ತನ್ನ ಕಿಸೆಯಲ್ಲಿದ್ದ ಚೂರಿ ತೆಗೆದು ಪೋಲೀಸರತ್ತ ಬೀಸಲಾರಂಬಿಸಿದ್ದ. ಆತನ ಸೆರೆ ಹಿಡಿಯಲು ದೈರ್ಯದಿಂದ ಮುನ್ನುಗ್ಗಿದ ಎಸೈ ಭಾರತಿಯವರು ಹೊಟ್ಟೆಗೆ ಇರಿಯಲೆಂದು ಚೂರಿ ಬಿಸಿದ್ದು ತಪ್ಪಿಸಿಕೊಂಡ ಎಸೈಯವರ ಕೈಗೆ ಚೂರಿ ತಾಗಿತ್ತು. ಇವರ ಹಿಂದೆಯೇ  ಸಲಾಂ ಮೇಲೆರಗಿದವರು ಚಂದ್ರಹಾಸ್ ಆಳ್ವಾ, ರಾಧಾಕೃಷ್ಣ ಹಾಗೂ ಸತೀಶ್ ಇವರ ಕೈ ಹಾಗೂ ಬೆನ್ನಿಗೆ ಇರಿದ ಗಾಯಗಳಾಗಿವೆ.  ಆದರೂ ಪಟ್ಟು ಬಿಡದ ಪೊಲೀಸರು ಸಲಾಂನನ್ನು ಸುತ್ತುವರಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅರಿವಿಗೆ ಬರುತ್ತಿದ್ದಂತೆ ಸಲಾಂ ತಾನೇಚೂರಿಯಿಂದ ಇರಿದುಕೊಳ್ಳಲಾರಂಬಿಸಿದ್ದ. ಅನಾಹುತ ಆಗುವ ಮೊದಲೇ ಪೊಲೀಸರು ಆತನನ್ನು ಚೂರಿ ಸಹಿತ ವಶಕ್ಕೆ ತೆಗೆದುಕೊಂಡಿದ್ದರು. ಸಲಾಂನ ಮುಖಕ್ಕೆ, ಕುತ್ತಿಗೆಗೆ ಚೂರಿಯಿಂದ ಇರಿದ ಗಾಯಗಳಾಗಿವೆ. ಸಲಾಂನನ್ನು ಸರಕಾರಿ ವೆಲ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿ ಜೈಲ್‌ಗೆ ಕಳುಹಿಸಲಾಗಿದೆ. ಭಾರತಿ ಮತ್ತು ಸಿಬ್ಬಂದಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಹಿನ್ನೆಲೆ: ಸಲಾಂ ವಿರುದ್ಧ ಮೂಡಬಿದ್ರೆ ಠಾಣೆಯಲ್ಲಿ ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕೋರ್ಟ್ ನಿಂದ ಸರ್ಚ್ ವಾರಂಟ್  ಹೊರಡಿಸಲಾಗಿತ್ತು. ಸಲಾಂ  ಜೋಕಟ್ಟೆಯಲ್ಲಿದ್ದಾನೆಂಬ ಖಚಿತ ವರ್ತಮಾನದ ಮೇರೆಗೆ ಎಸ್ಐ ಭಾರತ ತನ್ನ ಸಿಬ್ಬಂದಿ ಜೊತೆ ಕಾರ್ಯಾಚರಣೆಗೆ ತೆರಳಿದ್ದರು.

By suddi9

Leave a Reply

Your email address will not be published. Required fields are marked *