ಧಾರವಾಡ: ಹಿರಿಯ ಸಾಹಿತಿ, ವರಕವಿ ದ.ರಾ ಬೇಂದ್ರೆ ಅವರ ಪುತ್ರ ಡಾ. ವಾಮನ ಇನ್ನಿಲ್ಲ. ಬೆಳಿಗ್ಗೆ 4.30 ಕ್ಕೆ ವಿಧಿ ವಶರಾಗಿದ್ದು 8.20 ಕ್ಕೆ ಪಾರ್ಥಿವ ಶರೀರವನ್ನು ಧಾರವಾಡದ ಅವರ ಮನೆ ಶ್ರೀ ಮಾತಾಕ್ಕೆ ತರಲಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಓರ್ವ ಮಗಳು, ಸಹೋದರ ಇದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ ಪದವಿ ಪಡೆದ ವಾಮನ ಬೇಂದ್ರೆಯವರು, ಪುಣೆ ವಿಶ್ವವಿದ್ಯಾಲಯಕ್ಕೆ ‘ ಲಕ್ಷ್ಮೀಶನ ಜೈಮಿನಿ ಭಾರತ- ಒಂದು ಅಧ್ಯಯನ’ ಮಹಾಪ್ರಬಂಧ ಮಂಡಿಸಿ ಪಿ.ಎಚ್ ಡಿ ಪದವಿ ಗಳಿಸಿದರು.

vamana-bendre

ವಾಮನ ಬೇಂದ್ರೆಯವರ ಮೊದಲ ಕವನಮೊದಲು ತೊದಲು ನಂತರ ಅನಂತಧಾರೆ, ಸ್ಪಂದನ ಪ್ರಕಟಗೊಂಡವು. ಸೊಂಡಿಲ ಗಣಪ್ಪ ಬಂದ. ಸ್ಪರ್ಶ ಹಾಗೂ ಇತರ ನಾಟಕಗಳೂ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆ ಮಾಡಿದರು. ಕುಶಲ ಕವಿ ಲಕ್ಶ್ಮೀಶ, ಲಕ್ಶ್ಮೀಶ ಕಾವ್ಯ,- ಪರಂಪರೆ, ಲಕ್ಷ್ಮೀಶ ಒಂದು ಅಧ್ಯಯನ, ಬೇಂದ್ರೆ ಕಾವ್ಯ ಲೋಕ, ಬೇಂದ್ರೆ ಬೆಳಕು, ಕವಿಚೂತನವನ ಚೈತ್ರ ಲಕ್ಷ್ಮೀಶ. ಜೀವನಚೈತ್ರ ದ.ರಾ ಬೇಂದ್ರೆ ಜೀವನ ಪರಿಚಯ ಮುಂತಾದ ವಾಮನ ಬೇಂದ್ರೆಯವರ ಹಲವು ಕಥನಗಳು.

ಇದಲ್ಲದೆ ಕುಣಿಯೋಣು ಬಾರಾ, ಅಂಬಿಕಾತನಯ ಹಾಡು, ಬೆಳದಿಂಗಳ ನೋಡು ನೋಡ್ಯಾನ, ದಶಾವತಾರ, ಅಂಬಿಕಾತನಯ ಹಾಡ್ಯಾನ, ಕನ್ನಡಕ್ಕೆ ಕಿಟೆಲ್ ಕೊಟ್ಟ ಕೊಡುಗೆ. ನಾಳಿನ ಕನಸು, ಚೈತನ್ಯದ ಪೂಜೆ, ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ತ್ವ ಸಿದ್ಧಾಂತ, ಬೇಂದ್ರೆ ಋತುದರ್ಶನ, ಬೇಂದ್ರೆ ಸಮಗ್ರ ಕಾವ್ಯ ಸಂಪುಟ, ಬೇಂದ್ರೆಯವರ ಜೀವನ ಮಹಾಕಾವ್ಯ, ಔದುಂಬರ ಗಾಥೆ ಮುಂತಾದವ ಕೃತಿಗಳನ್ನು ಇವರು ಸಂಪಾದಿಸಿದರು.

ಅವರ ಭಾಷಾಂತರಗಳೆಂದರೆ ಗುರುಗೋವಿಂದ ಸಿಂಗ, ಭಾರತೀಯ ಸಾಹಿತ್ಯ ಸಂಕಲನ, ಕಾಲಾಯ ತಸ್ಮೈಯೇ ನಮಃ ಜಾನಪದ ಸಾಹಿತ್ಯ, ಸಮರ್ಥರಾಮದಾಸ, ಹಾಗೂ ಸ್ವಾಮಿ ವಿವೇಕಾನಂದ, ಮುಂತಾದವು. ಇದಲ್ಲದೆ ಅವರು ಬೇಂದ್ರೆಯವರ ಕವನಗಳನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿದ್ಯಾರಣ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಾ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ, ಶ್ರೀ ವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾಮನ ಬೇಂದ್ರೆಯವರಿಗೆ ಸಲ್ಲಿದ್ದವು.

By suddi9

Leave a Reply

Your email address will not be published. Required fields are marked *