ಮಂಗಳೂರು: ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೋಮವಾರ ಮಂಗಳೂರಿಗೆ ಭೇಟಿ ನೀಡಿ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಆಯಾ ಸಮುದಾಯದ ಶೇ.25ರಷ್ಟು ಮಕ್ಕಳಿಗೆ ಸೀಟು ನೀಡಿದರೆ ಅವುಗಳಿಗೆ ಅಲ್ಪಸಂಖ್ಯಾತ ಶಾಲೆಗಳ ಮಾನ್ಯತೆ ನೀಡುವ ಕುರಿತ ಸರಕಾರದ ನಿರ್ಧಾರದ ಸಾಧಕ ಬಾಧಕ ತಿಳಿದುಕೊಳ್ಳಲು 15 ದಿನದೊಳಗೆ ತಜ್ಞರ ಸಮಿತಿ ರಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಲಾಖೆ ಅಧಿಕಾರಿಗಳನ್ನು ಸೇರಿಸಿಕೊಂಡು ಶಿಕ್ಷಣ ತಜ್ಞರ ಸಮಿತಿ ರೂಪಿಸಿ ಸಮರ್ಪಕ ಕಾನೂನು ಅನುಷ್ಠಾನಕ್ಕೆ ಚರ್ಚೆ ನಡೆಸಲಾಗುವುದು. ಹಿಂದಿನ ಸರಕಾರವು ಭಾಷಾ/ಮತೀಯ ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳು ಎಂದು ಮಾನ್ಯತೆ ಪಡೆಯಲು ಆಯಾಯ ಸಮುದಾಯ ಶೇ.75 ಮಕ್ಕಳಿಗೆ ಸೀಟು ಕೊಡಬೇಕು ಎಂಬ ಕಾನೂನು ರೂಪಿಸಿತ್ತು. ಅದನ್ನು ಪ್ರಶ್ನಿಸಿ ಕೆಲವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಹಿಂದಿನ ಕಾನೂನುನಿಂದ ಆರ್ಟಿಇ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದೆ. ಈ ಕುರಿತು ರಾಜ್ಯ ಸರಕಾರ ನಿರ್ದಿಷ್ಟ ಮಾನದಂಡ ಮಾಡಬೇಕು ಎಂಬ ಸೂಚನೆಯನ್ನು ನ್ಯಾಯಾಲಯ ನೀಡಿದೆ. ಅದರ ಆಧಾರದಲ್ಲಿ ಕನಿಷ್ಟ ಮಿತಿಯನ್ನು 25ಕ್ಕೆ ಇಳಿಸುವ ನಿರ್ಧಾರ ಸರಕಾರ ಮಾಡಿದೆ. ಈ ವರ್ಷದ ಪ್ರವೇಶಾತಿ ಪ್ರಕ್ರಿಯೆ ಮುಗಿದಿದೆ. ಮುಂದಿನ ವರ್ಷ ಪೂರ್ಣ ಪ್ರಮಾಣದಲ್ಲಿ ಈ ವಿಚಾರ ಅನುಷ್ಠಾನಕ್ಕೆ ಬರಲಿದೆ. ಈ ಕುರಿತು ತೆಗೆದು ತೀರ್ಮಾನ ಚರ್ಚೆ ಮಾಡಿ ಮಾಡಿದ್ದೇವೆ. ರಾಜ್ಯದಲ್ಲಿ ಶೇ. 99.9 ಪುಸ್ತಕಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲಾಗಿದೆ. ಸಮವಸ್ತ್ರಗಳನ್ನು ಕೂಡ ಶೇ. 99 ಹಸ್ತಾಂತರ ಮಾಡಲಾಗಿದೆ. ಸೈಕಲ್ ವಿತರಣೆಯಾಗದಿರುವುದಕ್ಕೆ ಇಲಾಖೆ ಕಾರಣವಲ್ಲ. ಚುನಾವಣೆ ನೀತಿ ಸಂಹಿತೆ ಹಾಗೂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಇದು ಆಗಿಲ್ಲ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆ ಮುಂದುರಿಸಬೇಕಾಗಿದೆ. ನಮ್ಮ ಶಾಲೆಗಳಲ್ಲಿ 8ನೇ ತರಗತಿಗೆ ಕಲಿಸುವ ಅಧ್ಯಾಪಕರು ಪಾಠ ಮಾಡಲು ಪ್ರಸಕ್ತ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯ. ಕೇಂದ್ರ ಸರಕಾರದ ಉದ್ದೇಶ ಇಡೀ ರಾಷ್ಟ್ರದಲ್ಲಿ ಒಂದೇ ರೀತಿಯಲ್ಲಿ ಶಿಕ್ಷಣ ನೀಡುವಂಥದ್ದಾಗಿದೆ. ಕ್ರಮೇಣ ಇದು ಸಮರ್ಪಕ ರೀತಿಯಲ್ಲಿ ಅನುಷ್ಠಾನಕ್ಕೆ ಬರಲಿದೆ.


