ಮಂಗಳೂರು: ಶೈಕ್ಷಣಿಕವಾಗಿ ನಮ್ಮ ಜಿಲ್ಲೆಯನ್ನು ಯಾರೊಂದಿಗೂ ಹೋಲಿಸುವುದು ಬೇಡ : ಜಿಲ್ಲಾಧಿಕಾರಿ
ಎಸ್ಎಸ್ಎಲ್ಸಿ ಫಲಿತಾಂಶದ ಕುರಿತು ನಮ್ಮ ಜಿಲ್ಲೆಯನ್ನು ಚಿಕ್ಕೋಡಿಯೊಂದಿಗೆ ಹೋಲಿಸುವ ಅಗತ್ಯತೆ ಇಲ್ಲ. ಶಿಕ್ಷಣದ ಗುಣಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉತ್ತಮವಾಗಿದೆ ಎಂದು ದ.ಕ., ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.
ನಗರದ ರೊಸಾರಿಯೊ ಕಲ್ಚರಲ್ ಹಾಲ್ನಲ್ಲಿ ಶನಿವಾರ ನಡೆದ ಶೈಕ್ಷಣಿಕ ಸಮ್ಮೇಳನ- ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಯಾರ್ಯಾರ ಬಗ್ಗೆ ಚಿಂತೆ ಬೇಡ. ಐದು ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ಅದರಲ್ಲಿ ಒಬ್ಬ ವಿದ್ಯಾರ್ಥಿ ಯಾಕೆ ಅನುತ್ತೀರ್ಣನಾದ ಅನ್ನೋದು ಪ್ರಶ್ನೆ. ಒಬ್ಬ ಹುಡುಗ ಅನುತ್ತೀರ್ಣನಾದರೆ ಆತ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿಯುತ್ತಾನೆ. ಇದರಿಂದ ದೇಶಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ ಪ್ರತಿಯೊಂದು ವಿದ್ಯಾರ್ಥಿಯ ಫಲಿತಾಂಶ ನಮಗೆ ಮುಖ್ಯವಾಗಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಗೆ ಶೈಕ್ಷಣಿಕವಾಗಿ ತನ್ನದೇ ಆದ ಪ್ರಾಶಸ್ತ್ಯವಿದೆ. ಗುಣಮಟ್ಟದ ವಿಷಯದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಹೀಗಾಗಿ ಚಿಕ್ಕೋಡಿಯೊಂದಿಗೆ ನಮ್ಮ ಜಿಲ್ಲೆಯನ್ನು ಹೋಲಿಸುವ ಬದಲು, ಕೇರಳದೊಂದಿಗೆ ನಮ್ಮ ಸ್ಪರ್ಧೆ ಇರಲಿ. 97 ಶೇ ಫಲಿತಾಂಶವನ್ನು ಕೇರಳ ರಾಜ್ಯ ಹೊಂದಿದೆ. ಈ ನಿಟ್ಟಿನಲ್ಲಿ ಕಳೆದುಕೊಂಡಿರುವ ಸ್ಥಾನವನ್ನು ಪಡೆಯಲು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಶಿಕ್ಷಣ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸಬೇಕಾದ ಅಗತ್ಯತೆ ಇದೆ.
ಶ್ರೇಣೀಕೃತ ಸಮಾಜದಲ್ಲಿ ವಿವಿಧ ಕಸುಬಿನ, ಕೌಟುಂಬಿಕ ಹಿನ್ನಲೆಯಿಂದ ಬಂದಿರುವ ಮಕ್ಕಳು ಸರ್ಕಾರಿ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಇಂತಹ ಮಕ್ಕಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವಂತೆ ಮಾಡುವುದು ನಿಜವಾದ ಸಾಧನೆಕವಿ, ಸಮಾಜ ಸುಧಾರಕರಿಂದ ಹಿಡಿದು ಎಲ್ಲರೂ ಜಾತಿ ಆಧಾರದಲ್ಲಿ ಕಾಣಸಿಗುತ್ತಾರೆ. ನಮಗೆ ಮೊದಲು ಕನಕದಾಸ, ವಾಲ್ಮೀಕಿ ಮೊದಲಾದವರ ಜಾತಿ ಗೊತ್ತಿರಲಿಲ್ಲ. ಆದರೆ ಇಂದಿನ ಶ್ರೇಣೀಕೃತ ಸಮಾಜದಲ್ಲಿ ಎಲ್ಲವೂ ಜಾತಿ ಆಧಾರದಲ್ಲಿ ಕಾಣಸಿಗುವ ಈ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳು ಉಳಿದು ಬೆಳೆಯಬೇಕಾದ ಅಗತ್ಯತೆ ಇದೆ ಎಂದರು. ನಮ್ಮ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎನ್ನುವ ರೀತಿಯಲ್ಲಿ ಪ್ರತಿಯೊಂದು ಶಾಲೆಯ ಮುಖ್ಯೋಪಾಧ್ಯಾಯರು ಕಾರ್ಯನಿರ್ವಹಿಸಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ಧೇಶಕ ಮೋಸೆಸ್ ಜಯಶೇಖರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಆರ್.ತಿಮ್ಮಯ್ಯ, ಸವಣೂರು ವಿದ್ಯಾರಶ್ಮಿ ,ವಿದ್ಯಾಲಯ ಪ್ರಿನ್ಸಿಪಾಲ್ ಸೀತಾರಾಮ ಕೇವಲ್, ಸೈಂಟ್ ಜೋಸೆಫ್ ಮಹಾವಿದ್ಯಾಲಯ ಸಂಚಾಲಕ ಲೋರೆನ್ಸ್ ಡಿ ಸೋಜ, ತುಂಬೆ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಗಂಗಾಧರ ಆಳ್ವ ಕೆ., ಉಪಸ್ಥಿತರಿದ್ದರು.
ನಿವೃತ್ತಿ ಹೊಂದಿದ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯೋಪಾದ್ಯಾಯರು ಮತ್ತು ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಯರಾಮ್ ಪೂಂಜ ಸ್ವಾಗತಿಸಿದರು. ಬದ್ರಿಯಾ ಕಾಲೇಜಿನ ಪ್ರಿನ್ಸಿಪಾಲ್ ಡಾ.ಇಸ್ಮಾಯಿಲ್ ಪ್ರಾಸ್ತಾವಿಕ ಮಾತನಾಡಿದರು.
ದ.ಕ., ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮತ್ತು ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘ ಮತ್ತು ಫೆಡರೇಶನ್ ಪಿಯುಸಿ ಕಾರ್ಯಕ್ರಮ ಆಯೋಜಿಸಿತ್ತು



