ಬದುಕಿನಲ್ಲಿ ಗುರಿ ಮುಖ್ಯ: ಗುರಿಯಷ್ಟೇ ಗುರಿಯನ್ನು ಸಾಧಿಸಲಿರುವ ಮಾರ್ಗವೂ ಮುಖ್ಯ . ಗುರಿ ಸಾಧಿಸಲು ಸನ್ಮಾರ್ಗವನ್ನು ಬಳಸಲು ನಮ್ಮನ್ನು ನಿರ್ದೇಶಿಸುವುದೇ ಯೋಗ. ಚಂಚಲ ಚಿತ್ತವನ್ನು ಸ್ಥಿರವಾಗಿರಿಸಿ ಗುರಿಯತ್ತ ನಮ್ಮನ್ನು ಮುನ್ನಡೆಸಲು ಯೋಗ ಸಹಕಾರಿ. ಯೋಗವೆಂದರೆ ಬರೀ ಯೋಗಾಸನವಲ್ಲ, ಆಸನ ಯೋಗಸಾಧನೆಯ ಮೊದಲ ಮೆಟ್ಟಿಲು. ಇದನ್ನು ಸಾಧಿಸಿದ ಬಳಿಕ ಮುಂದಿನ ಮೆಟ್ಟಿಲುಗಳನ್ನು ಏರಿ ಯೋಗಪಟುವಾಗಬೇಕು, ಒಳ್ಳೆಯ ಮನುಷ್ಯನಾಗಬೇಕು. ಯೋಗ ಮುಕ್ತಿಗೆ ದಾರಿ. ಜೂನ್ 21ಕೇವಲ ಒಂದು ದಿನಾಂಕವಲ್ಲ, ಇದು ನಮ್ಮಪಾಲಿಗೆ ಅತಿ ದೀರ್ಘವಾದ ಹಗಲೂ ಹೌದು. ಈ ವಿಶೇಷ ದಿನದಂದೇ ಯೋಗ ದಿನ ಅದರಲ್ಲೂ ಅಂತಾರಾಷ್ಟ್ರೀಯ ಯೋಗದಿನ ನಮ್ಮಿಂದಾಗಿ ಆಚರಿಸಲ್ಪಡುವುದು ಸುಯೋಗ ಎಂದು ವಿಠಲ ಪ.ಪೂ.ಕಾಲೇಜಿನ ಪ್ರೌಢ ಶಾಲಾ ವಿಭಾಗದ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಕೃಷ್ಣ ಭಟ್ ಹೇಳಿದರು.
ವಿಠಲ ಪ.ಪೂ.ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ “ಸಂಪನ್ನ…”ವು ಆಯೋಜಿಸಿದ್ದ ‘ವಿಶ್ವ ಯೋಗ ದಿನಾಚರಣೆಯ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಏಕಾಗ್ರತೆ-ನೆನಪಿನ ಶಕ್ತಿ-ಒತ್ತಡ ನಿರ್ವಹಣೆ ಸಂಬಂಧಿತ ಪ್ರಾಣಾಯಾಮಗಳನ್ನು ಹೇಳಿಕೊಟ್ಟರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಎ.ಎಸ್.ಆದರ್ಶರು ಭಾರತೀಯ ಜೀವನ ಪದ್ಧತಿ ಯೋಗಕ್ಕೆ ತೀರಾ ಹತ್ತಿರ . ಬದಲಾಗುತ್ತಿರುವ, ವಿಷಮಯವಾಗುತ್ತಿರುವ ಇಂದಿನ ಜೀವನ ಶೈಲಿಗೆ ಯೋಗ ತೀರಾ ಅಗತ್ಯ.ಇಡೀ ಜಗತ್ತೇ ಈ ಕುರಿತಂತೆ ಭಾರತದತ್ತ ಮಾರ್ಗದರ್ಶನಕ್ಕಾಗಿ ನೋಡುತ್ತಿದೆ ಕಾಯುತ್ತಿದೆ. ಯೋಗ ನಮಗೆ ಬೇಕೇ ಬೇಕು. ಇದನ್ನು ಬದುಕಲ್ಲಿ ಅಳವಡಿಸಿ ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು. ಕನ್ನಡ ಉಪನ್ಯಾಸಕ ಯು.ಎಸ್.ವಿಶ್ವೇಶ್ವರ ಭಟ್ ರವರು “ಅಂಗೈಯಲ್ಲಿ ಆರೋಗ್ಯ” ಕಾರ್ಯಕ್ರಮದಲ್ಲಿ ಮುದ್ರಾ ವಿಜ್ಞಾನದ ಬಗ್ಗೆ ತರಬೇತಿ ನೀಡಿದರು. ಆಂಗ್ಲ ಉಪನ್ಯಾಸಕ ಕೆ.ರಘುವೀರರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಗಣಕ ವಿಜ್ಞಾನ ಉಪನ್ಯಾಸಕ ಚಂದ್ರಕಾಂತ ಡಿ. ವಂದಿಸಿದರು. ಉಪನ್ಯಾಸಕಿ ಸವಿತಾ ಉಪಸ್ಥಿತರಿದ್ದರು.
