ಮುಂಬಯಿ, ಮೇ.20: ಹೆಬ್ರಿ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು ಮಳೆ ಸಹಿತ ಬೀಸಿದ ಭಾರೀ ಬಿರುಗಾಳಿಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಹೆಬ್ರಿ, ಮುದ್ರಾಡಿ, ಬಚ್ಚಪ್ಪು, ಸೀತಾನದಿ, ಸೋಮೇಶ್ವರ ಸೇರಿದಂತೆ ಹಲವೆಡೆ ಹಲವಾರು ಮರಗಳು ನೆಲಕ್ಕುರುಳಿವೆ.300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಸೀತಾನದಿ, ಸೋಮೇಶ್ವರ, ಬಚ್ಚಪ್ಪು ಪರಿಸರದಲ್ಲಿ ನೂರಾರು ಬೃಹತ್ ಮರಗಳು ಗಾಳಿಗೆ ಉರುಳಿಬಿದ್ದು ಅರಣ್ಯ ನಾಶವಾದಂತಾಗಿದೆ. ಮುದ್ರಾಡಿ ಬಚ್ಚಪ್ಪು ಆಗುಂಬೆ ರಸ್ತೆಯ ಮೇಲೆ ಬೃಹತ್ ಮರಗಳು ರಸ್ತೆಯ ಮೇಲೆ ಬಿದ್ದು ಕೆಲಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು.

01 (1)

02

03

04

05

06

07

09
ಹೆಬ್ರಿ ಸರ್ಕಾರಿ ಸಮುದಾಯ ಆಸ್ಪತ್ರೆಯ ಶವಗಾರದ ಮೇಲೆ ಮಾವಿನ ಮರ ಉರುಳಿ ಬಿದ್ದು ಶವಗಾರಕ್ಕೆ ಸಂಪೂರ್ಣ ಹಾನಿಯಾಗಿದೆ. ಹೆಬ್ರಿಯ ಬಚ್ಚಪ್ಪು ಹಿರಿಯಣ್ಣ ನಾಯ್ಕ್ ಮನೆಯ ಮೇಲೆ ಅಡಿಕೆ ಮರಗಳು ಬಿದ್ದು ಹಾನಿಯಾಗಿದೆ.ಬಚ್ಚಪ್ಪು ಶೀನಾ ನಾಯ್ಕ್ ಅವರ ಮನೆಯ ಮಾಡಿನ ತಗಡು ಶೀಟುಗಳು ಹಾರಿ ಹೋಗಿ ಹಾನಿಯಾಗಿದೆ. ಹೆಬ್ರಿ ಮುದ್ರಾಡಿ ಪರಿಸರದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಹಲವು ಕಡೆಗಳಲ್ಲಿ ತೋಟಗಳಲ್ಲಿ ಅಡಿಕೆ ಮತ್ತು ತೆಂಗಿನ ಮರಗಳು ಗಾಳಿಗೆ ಉರುಳಿ ಕೃಷಿಗೆ ಅಪಾರ ಹಾನಿಯಾಗಿವೆ. ಯಾವೂದೇ ಪ್ರಾಣಾಪಾಯ ಸಂಭವಿಸಿಲ್ಲ. ಮುದ್ರಾಡಿಯ ಟ್ವಿಂಕಲ್ ರಬ್ಬರ್ ನರ್ಸರಿಯ 2000 ಕ್ಕೂ ಹೆಚ್ಚು ರಬ್ಬರ್ ಗಿಡಗಳು ತುಂಡಾಗಿ ಬಿದ್ದಿವೆ. ಮುದ್ರಾಡಿ,ಹೆಬ್ರಿಯ ಗೇರು ಬೀಜ ಕಾರ್ಖಾನೆ,ವಾಣಿಜ್ಯ ಸಂಕೀರ್ಣ,ವಸತಿ ಸಮುಚ್ಚಯ ಸಹಿತ ಕಟ್ಟಡಗಳಿಗೆ ಹಾನಿಯಾಗಿದೆ. ಇದೊಂದು ಭಯಂಕರ ಬಿರುಗಾಳಿ ನಮ್ಮ ಪರಿಸರದಲ್ಲಿ ಇಂತಹ ಬಿರುಗಾಳಿ ತಾನು ಕಂಡಿಲ್ಲ,ಪ್ರಳಯದ ರೀತಿ ಘಟನೆ ಸಂಭವಿಸಿದೆ ಎಂದು ಘಟನಾ ಸ್ಥಳಕ್ಕೆ ಕಾರಿನಲ್ಲಿ ಹೋಗಲಾಗದೇ ಸ್ಥಳೀಯ ಮುಖಂಡ ಹೆಬ್ರಿ ಜನಾರ್ಧನ್ ಅವರ ಬೈಕಿನಲ್ಲೇ ತೆರಳಿದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಪತ್ರಿಕೆ ಪ್ರತಿಕ್ರಿಯಿಸಿದ್ದಾರೆ.
300ಕ್ಕೂ ಹೆಚ್ಚು ವಿದ್ಯುತ್ ಧರೆಗೆ : ಮೆಸ್ಕಾಂಗೆ ಅಪಾರ ನಷ್ಟ :
ಹೆಬ್ರಿ,ಮುದ್ರಾಡಿ,ಸೀತಾನದಿ,ಬಚ್ಚಪ್ಪು ಸೇರಿದಂತೆ ಹೆಬ್ರಿ ಪರಿಸರದಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ. ಮೆಸ್ಕಾಂ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್ ಶರತ್‍ಚಂದ್ರ ಪಾಲ್,ಹೆಬ್ರಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರತಾಪಚಂದ್ರ ಶೆಟ್ಟಿ ಸೇರಿದಂತೆ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ರಿಯ ಮೆಸ್ಕಾಂ ಜೂನಿಯರ್ ಎಂಜಿನಿಯರ್ ಸಂದೀಪ್ ನೇತ್ರತ್ವದ ತಂಡ ವಿದ್ಯುತ್ ಸಂಪರ್ಕದ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಇನ್ನೂ ನಾಲ್ಕು ದಿನ ಹೆಬ್ರಿ ಪರಿಸರದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
ನೂರಾರು ಮರಗಳು ನೆಲಕ್ಕೆ ಭಾರೀ ಅರಣ್ಯ ನಾಶ : ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಸೀತಾನದಿ,ಸೋಮೇಶ್ವರ,ಬಚ್ಚಪ್ಪು ಪರಿಸರದಲ್ಲಿ ನೂರಾರು ಬೃಹತ್ ಮರಗಳು ಗಾಳಿಗೆ ಉರುಳಿಬಿದ್ದು ಭಾರೀ ಅರಣ್ಯನಾಶವಾಗಿದ್ದು, ರಸ್ತೆಯ ಮೇಲೆ ಬಿದ್ದ ಮರಗಳನ್ನು ಅರಣ್ಯಾಧಿಕಾರಿಗಳು ಸ್ಥಳೀಯರ ನೆರವಿನಿಂದ ತೆರವು ಮಾಡಿ ಸುಗಮ ರಸ್ತೆ ಸಂಚಾರಕ್ಕೆ ವ್ಯವಸ್ಥೆಗೊಳಿಸಿದರು. ಕಳೆದ ವರ್ಷವು ಮುನಿಯಾಲು ಮುಟ್ಲುಪಾಡಿಯಿಂದ ಮುದ್ರಾಡಿ ಹೆಬ್ರಿ ಚಾರದ ತನಕ ಭಾರಿ ಬಿರುಗಾಳಿಯಿಂದಾಗಿ ಅಪಾರ ಹಾನಿಯಾಗಿರುವುದನ್ನು ನೆನಪಿಸಬಹುದು.
ಸ್ಥಳಕ್ಕೆ ಜನಪ್ರತಿನಿಧಿಗಳ ಬೇಟಿ: ಕಾರ್ಕಳ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ,ಕಂದಾಯ ಇಲಾಖೆಯ ಅಧಿಕಾರಿಗಳು,ಜಿಲ್ಲಾ ಪಂಚಾಯತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ,ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ,ತಾಲ್ಲೂಕು ಪಂಚಾಯತಿ ಸದಸ್ಯ ರಮೇಶ ಪೂಜಾರಿ,ಚಂದ್ರಶೇಖರ ಶೆಟ್ಟಿ,ಹೆಬ್ರಿ ಪಂಚಾಯತಿ ಅಧ್ಯಕ್ಷ ಎಚ್.ಸುಧಾಕರ ಹೆಗ್ಡೆ,ಸದಸ್ಯರಾದ ಗಣೇಶ್ ಕುಮಾರ್ ಜರ್ವತ್ತು,ವಿಶ್ವನಾಥ ಹೆಗ್ಡೆ,ಸುಮಿತ್ರಾ ಹೆಗ್ಡೆ,ವರಂಗದ ಸುರೇಂದ್ರ ಕುಲಾಲ್,ಬಿಜೆಪಿ ಯುವ ಮೋರ್ಚಾದ ಪ್ರಮುಖ ಸಮೃದ್ದಿ ಪ್ರಕಾಶ ಶೆಟ್ಟಿ,ಮುಖಂಡ ಮೋಹನದಾಸ ನಾಯಕ್,ಕಾಂಗ್ರೆಸ್ ಯುವ ಮುಖಂಡ ಹೆಬ್ರಿ ಜನಾರ್ಧನ್ ಸಹಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *