ವಾಮಂಜೂರು: ಫೆ.6 ರಂದು ಶನಿವಾರ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು, ಮಂಗಳೂರು ಇಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ವಿಶೇಷ ಸಾಮರ್ಥ್ಯದ ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧೆ ಕಲೋತ್ಸವದ ದಶಮಾನೋತ್ಸವ ಕಾರ್ಯಕ್ರಮವು ಜರಗಲಿದೆ. ದಿ. ಮಾತೃಶ್ರೀ ರತ್ನಮ್ಮ ಹೆಗ್ಗಡೆ ಯವರ ಸ್ಮರಣಾರ್ಥ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಕಳೆದ 9 ವರ್ಷಗಳಿಂದ ವಿಶೇಷ ಶಾಲೆಗಳಲ್ಲಿ ಕಲಿಯುತ್ತಿರುವ ವಿಶೇಷ ಸಾಮರ್ಥ್ಯದ ಮಕ್ಕಳ ಪ್ರತಿಭೆಯ ಅನಾವರಣಕ್ಕಾಗಿ ಕಲೋತ್ಸವವನ್ನು ಆಚರಿಸಲಾಗುತ್ತಿದ್ದು ಈ ಕಾರ್ಯಕ್ರಮಗಳಲ್ಲಿ ಉಭಯ ಜಿಲ್ಲೆಗಳ ಶ್ರವಣ ನ್ಯೂನತೆಯ, ಬುದ್ಧಿಮಾಂದ್ಯತೆಯ, ದೈಹಿಕ ನ್ಯೂನತೆಯ, ದೃಷ್ಟಿ ದೋಷವುಳ್ಳ, ಕಲಿಕಾ ನ್ಯೂನತೆ ಹಾಗೂ ಆಟಿಸಂ ನಿಂದ ಬಳಲುತ್ತಿರುವ ಮಕ್ಕಳು ಭಾಗವಹಿಸುತ್ತಿದ್ದಾರೆ.

ಈ ವರ್ಷ ಕಲೋತ್ಸವದ ದಶಮಾನೋತ್ಸವ ಕಾರ್ಯಕ್ರಮವು ಜರಗುತ್ತಿದೆ. ಈ ಅಂಗವಿಕಲರ ಕಲ್ಯಾಣ ಸಂಸ್ಥೆ(ರಿ), ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಅಧ್ಯಕ್ಷರಾಗಿರುವ ಡಾ. ಡಿ ವೀರೇಂದ ಹೆಗ್ಗಡೆಯವರು, ಧರ್ಮಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಪ್ರದೀಪ್ ಜಿ ಪೈ, ಆಡಳಿತ ನಿರ್ದೇಶಕರು ಹ್ಯಾಂಗ್ಯೋ ಐಸ್ ಕ್ರೀಮ್ಸ್ ಇವರು ಭಾಗವಹಿಸಲಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀ ಸುಂದರ ಪೂಜಾರಿಯವರು ಇನ್ನೋರ್ವ ಮುಖ್ಯ ಅತಿಥಿ. ಶ್ರೀ ಎ ಪಿ ಭಟ್, ಸಮಾಜ ಸೇವಕರು ಉಡುಪಿ ಇವರು ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಲೋತ್ಸವ ದಶಮಾನೋತ್ಸವ ಸಂದರ್ಭದಲ್ಲಿ ಉಭಯ ಜಿಲ್ಲೆಗಳ, ವಿಶೇಷ ಮಕ್ಕಳ ಸೇವೆಯಲ್ಲಿ ತೊಡಗಿಕೊಂಡಿರುವ 12 ವಿಶೇಷ ಶಾಲೆಗಳನ್ನು ಗೌರವಿಸುವ ಕಾರ್ಯಕ್ರಮವಿದೆ. ಸುಮಾರು 250 ವಿಶೇಷ ಮಕ್ಕಳು, ಸಂಗೀತ, ಚಿತ್ರಕಲೆ, ನೃತ್ಯ, ಛದ್ಮವೇಷ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ವಿಜೇತ ಸ್ಪರ್ಧೆಗಳಿಗೆ ಬಹುಮಾನಗಳಲ್ಲದೆ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ದಿವಂಗತ ಮೋಹಿನೀ ಅಪ್ಪಾಜೀ ನಾಯ್ಕ್ ಇವರಿಂದ ಸ್ಥಾಪಿತವಾದ ಅಂಗವಿಕಲರ ಕಲ್ಯಾಣ ಸಂಸ್ಥೆ(ರಿ), ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯು 1981 ರಲ್ಲಿ ಆರಂಭವಾಗಿ ಕಳೆದ 35 ವರ್ಷಗಳಿಂದ ವಿಶೇಷ ಸಾಮರ್ಥ್ಯದ ಮಕ್ಕಳನ್ನು(ಶ್ರವಣ ನ್ಯೂನತೆಯ, ಬುದ್ಧಿಮಾಂದ್ಯತೆಯ, ದೈಹಿಕ ನ್ಯೂನತೆಯ, ದೃಷ್ಟಿ ದೋಷವುಳ್ಳ, ಕಲಿಕಾ ನ್ಯೂನತೆ ಹಾಗೂ ಆಟಿಸಂ ನಿಂದ ಬಳಲುತ್ತಿರುವ ಮಕ್ಕಳು) ಸಾಮಾನ್ಯ ಮಕ್ಕಳ ಜೊತೆ ಸೇರಿಸಿ ವಿದ್ಯಾಭ್ಯಾಸ ಕೊಡುವ ಸಮನ್ವಯ ಶಿಕ್ಷಣ ವಿಧಾನದಿಂದ ಶಿಕ್ಷಣವನ್ನು ಕೊಡುತ್ತಿದೆ.
ಇದುವರೆಗೆ 1000 ಕ್ಕೂ ಹೆಚ್ಚು ವಿಶೇಷ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ವಿದ್ಯಾಭ್ಯಾಸ, ವೃತ್ತಿತರಬೇತಿ ಹಾಗೂ ಇತರ ಸೇವೆಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ 205 ವಿಶೇಷ ವಿದ್ಯಾರ್ಥಿಗಳು ಹಾಗೂ 400 ಸಾಮಾನ್ಯ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. ಸಂಸ್ಥೆಯು ಎಸ್ ಡಿ ಎಂ ಎಜ್ಯುಕೇಶನಲ್ ಸೊಸೈಟಿ ಉಜಿರೆ ಇದರ ಆಡಳಿತಕ್ಕೊಳಪಟ್ಟಿದೆ.
