ಮಂಗಳೂರು: ದೇರೆಬೈಲ್ ಕೊಂಚಾಡಿ ಚರ್ಚ್ ಎದುರಿನ ಮುಖ್ಯ ರಸ್ತೆ ಬಳಿಯ ನಿರ್ಮಾಣ ಹಂತದ ವಸತಿ ಸಮುಚ್ಚಯ ಪಕ್ಕದ ಆವರಣ ಗೋಡೆ ಸಹಿತ ಮಣ್ಣು ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.
ಕೊಂಚಾಡಿ ಗುಡ್ಡೆ ಕುಸಿತ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಾರಾಯಣಪುರದ ಕಾಶಪ್ಪ (40) ಮೃತಪಟ್ಟಿದ್ದು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ವೆಂಕಟಗಿರಿ ತಾಂಡದ ಶಿವಪ್ಪ ನಾಯಕ್ (21) ಮತ್ತು ಅವರ ಬಾವ ಸ್ವಾಮಿ ನಾಯಕ್ (35) ಗಾಯಗೊಂಡಿದ್ದಾರೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಸುಮಾರು 20 ಮಂದಿ ಕಾರ್ಮಿಕರು ಕಟ್ಟಡದ ಕೆಲಸ ಮಾಡುತ್ತಿದ್ದರು. ಕಟ್ಟಡದ ಒಂದು ಮೂಲೆಯಲ್ಲಿದ್ದ ಹೊಂಡ ಮುಚ್ಚಲು ಗೋಡೆಯ ಮಣ್ಣನ್ನು ಹಿಟಾಚಿ ಯಂತ್ರ ಮೂಲಕ ಕೊರೆಯಲಾಗುತ್ತಿತ್ತು. ಅಡಿಯಲ್ಲಿ ಆರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆಗ ಮೇಲ್ಭಾಗದ ಎತ್ತರದಲ್ಲಿರುವ ಮನೆಯ ಆವರಣ ಗೋಡೆ ಅವರ ಮೇಲೆ ಕುಸಿದು ದುರ್ಘಟನೆ ಸಂಭವಿಸಿತು.

ಮಣ್ಣು ಕುಸಿದ ಸಂದರ್ಭದಲ್ಲಿ ವಸತಿ ಸಮುಚ್ಚಯದ ಸುತ್ತ ನಿರ್ಮಿಸಿದ್ದ ತಗಡಿನ ಆವರಣ ಹಾಗೂ ಎತ್ತರದಲ್ಲಿರುವ ಲಾಯ್ ಪಿಂಟೊ ಅವರ ಮನೆ ಆವರಣ ಗೋಡೆಯ ಕಪ್ಪು ಕಲ್ಲುಗಳು ಹಾಗೂ ಭಾಗಶಃ ಅಂಗಳ ಕೂಡ ಕುಸಿದು ಬಿದ್ದಿದೆ.

ಮಣ್ಣಿನಡಿಗೆ ಬಿದ್ದಿದ್ದ ಮೂವರನ್ನು ತಕ್ಷಣ ಮೇಲಕ್ಕೆತ್ತಿದ್ದು, ಈ ಸಂದರ್ಭದಲ್ಲಿ ಕಾಶಪ್ಪ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಪಕ್ಕದ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸ್ವಾಮಿ ನಾಯಕ್ ಎಂಬವರ ಕಾಲಿಗೆ ಮತ್ತು ಶಿವನಾಯಕ್ ಸೊಂಟಕ್ಕೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ವ್ಯಕ್ತಿ ಹಾಗೂ ಗಾಯಾಳುಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಕಾವೂರು ಪೊಲೀಸರು ಕೇಸು ದಾಖಲಿಸಿದ್ದಾರೆ.

ಗೋಡೆ ಕುಸಿಯದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಕುಸಿದು ಬಿದ್ದು, ದುರಂತ ಸಂಭವಿಸಿದೆ. ನಿನ್ನೆಯಷ್ಟೇ ಈ ಕಾರ್ಮಿಕರು ಕೆಲಸಕ್ಕೆ ಸೇರಿದ್ದಾರೆ. ಕಾರ್ಮಿಕರ ಆಸ್ಪತ್ರೆ ಖರ್ಚು ವೆಚ್ಚ ಭರಿಸುತ್ತೇನೆ ಎಂದು ಆಸ್ಪತ್ರೆಯಲ್ಲಿದ್ದ ಗುತ್ತಿಗೆಗಾರ ಡೆನ್ಜಿಲ್ ಫರ್ನಾಂಡಿಸ್ ಪತ್ರಿಕೆಗೆ ತಿಳಿಸಿದರು.

By suddi9

Leave a Reply

Your email address will not be published. Required fields are marked *