ಮಂಗಳೂರು, : ಬಲೆಯಲ್ಲಿ ಭಾರೀ ಗಾತ್ರದ ಮೀನುಗಳ ಬೇಟೆ, ಗಾಳದ ಮೂಲಕ ವಿವಿಧ ರೀತಿಯ ಮೀನುಗಳನ್ನು ಹಿಡಿದ ಜನರು, ಮೀನು ಮೇಳ ವೀಕ್ಷಿಸಲು ಬಂದ ಜನಸಾರ, ಪಿಲಿಕುಳ ನಿಸರ್ಗಧಾಮದಲ್ಲಿ ಭಾನುವಾರ ನಡೆದ ಮೀನು ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಭಾನುವಾರ ಪಿಲಿಕುಳ ಮತ್ಸ್ಯೋತ್ಸವ ನಡೆಯಿತು. ಪಿಲಿಕುಳ ನಿಸರ್ಗಧಾಮ ಸೊಸೈಟಿ, ಮೀನುಗಾರಿಕೆ ಇಲಾಖೆ, ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ಮೀನುಗಾರಿಕೆ ಕಾಲೇಜು ಜಂಟಿಯಾಗಿ ಇದನ್ನು ಆಯೋಜಿಸಿತ್ತು. [ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ] ಬಲೆಯ ಮೂಲಕ ಹಿಡಿದ ಮೀನನ್ನು ಮೇಳದಲ್ಲಿಯೇ ಮಾರಾಟ ಮಾಡಲಾಯಿತು. 7.5 ಕೆ.ಜಿ. ತೂಕದ ಮೀನು ಒಂದು ಸಾವಿರ ರೂ.ಗೆ, ನಂತರ ವಿವಿಧ ಗಾತ್ರದ ಮೀನು ಬೇರೆ-ಬೇರೆ ದರಕ್ಕೆ ಮಾರಾಟವಾದವು. ಅಂದಾಜು 600 ಕೆ.ಜಿ. ಮೀನು ಮಾರಾಟವಾಗಿದ್ದು, 30 ಸಾವಿರ ರೂ. ಆದಾಯ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಪಾಲಿಕೆ ಉಪ ಆಯುಕ್ತ ರಾಜು ಮೊಗವೀರ, ಪಿಲಿಕುಳ ನಿಸರ್ಗಧಾಮದ ಯೋಜನಾ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮಾ, ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಪ್ರಸಾದ್ ಮುಂತಾದವರು ಮೇಳದಲ್ಲಿ ಪಾಲ್ಗೊಂಡಿದ್ದರು.


