ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಭರ್ಜರಿ ಮುನ್ನಡೆ ಸಾಧಿಸಿದೆ ಆಮ್ ಆದ್ಮಿ ಪಕ್ಷ, ಇದು ದೆಹಲಿ ಜನತೆಯ ಗೆಲುವು, ಈ ಅಭೂತಪೂರ್ವ ಗೆಲುವು ನೀಡಿದ ದೆಹಲಿ ಜನತೆಗೆ ವಂದನೆ, ಅಭಿನಂದನೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದಾರೆ.
ಆಪ್ ಕಚೇರಿಯ ಬಳಿ ವಿಜಯೋತ್ಸವ ಆಚರಿಸುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಇದು ಸತ್ಯಕ್ಕೆ ದೊರಕಿದ ಅಭೂತಪೂರ್ವ ಗೆಲುವು. ಈ ಗೆಲುವಿನಿಂದಾಗಿ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಮತ್ತು ಭಯವೂ ಆಗುತ್ತಿದೆ ಎಂದು ಹೇಳಿದರು.

 

09ls1

 

APTOPIX_India_Elections__systems@deccanmail (1)

ನಾನು ಒಬ್ಬ ಸಣ್ಣ ವ್ಯಕ್ತಿ, ಎಲ್ಲರೂ ಸೇರಿ ದೆಹಲಿ ಜನತೆಯ ಸೇವೆ ಮಾಡಬೇಕಿದೆ. ದೆಹಲಿ ಎಲ್ಲರಿಗೂ ಸೇರಿದ್ದು ಎಂದು ಹೇಳಿರುವ ಕೇಜ್ರಿವಾಲ್, ತಾವು ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಭ್ರಷ್ಟಾಚಾರ ಮತ್ತು ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವುದಾಗಿ ಹೇಳಿದ್ದಾರೆ.
ಅಹಂಕಾರದಿಂದಾಗಿ ಬಿಜೆಪಿ, ಕಾಂಗ್ರೆಸ್ ಈ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿವೆ. ಹೀಗಾಗಿ ನಾವು ಗೆದ್ದಿದ್ದೇವೆ ಎಂದು ಅಹಂಕಾರ ಪಡುವುದು ಬೇಡ. ಅಂಹಕಾರ ತೋರಿಸಿದರೆ ಮುಂದಿನ ಚುನಾವಣೆಯಲ್ಲಿ ಜನರು ನಮ್ಮನ್ನು ಸೋಲಿಸುವುದು ಗ್ಯಾರಂಟಿ ಎಂದು ಕೇಜ್ರಿವಾಲ್ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಐತಿಹಾಸಿಕ ಗೆಲುವಿನ ಬಗ್ಗೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಎಎಪಿ ಕ್ಲೀನ್ ಸ್ವೀಪ್‌ಗೆ ಕಾಂಗ್ರೆಸ್‌ನ ದಶಕಗಳ ದುರಾಡಳಿತವೇ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಇನ್ನು ಕೊನೆ ಕ್ಷಣದಲ್ಲಿ ಕಿರಣ್ ಬೇಡಿ ಅವರನ್ನು ಪಕ್ಷಕ್ಕೆ ಕರೆತಂದು, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ದೇ ದೊಡ್ಡ ತಪ್ಪು ಎಂದು ಹೆಸರು ಹೇಳಲಿಚ್ಚಸದ ರಾಜ್ಯ ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಎಎಪಿ ಚಂದ್ರನನ್ನೇ ಧರೆಗಿಳಿಸುವುದಾಗಿ ಭರವಸೆ ನೀಡಿತ್ತು. ಆದರೂ ನಾವು ಎಚ್ಚೆತ್ತುಕೊಂಡು ಉತ್ತಮ ಭರವಸೆಗಳನ್ನು ನೀಡಲಿಲ್ಲ ಎಂದು ರಾಜ್ಯ ನಾಯಕರು ತಿಳಿಸಿದ್ದಾರೆ. ನಾವು ಸಹ ಉಚಿತ ವೈಫೈ, ಉಚಿತ ನೀರು ಹಾಗೂ ವಿದ್ಯುತ್‌ನಂತಹ ದೊಡ್ಡ ದೊಡ್ಡ ಭರವಸೆಗಳನ್ನು ಕೊಡಬೇಕಿತ್ತು ಎಂದು ಅವರು ಹೇಳಿದ್ದಾರೆ.
ನಾವು ಚುನಾವಣೆ ಫಲಿತಾಂಶದ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಕಾಂಗ್ರೆಸ್ ಮತ ಎಎಪಿ ಮತವಾಗಿ ಪರಿವರ್ತನೆಯಾಗಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್ ಅವರು ಹೇಳಿದ್ದಾರೆ.

 

By suddi9

Leave a Reply

Your email address will not be published. Required fields are marked *