ಮಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕ್ಯಾನ್ಸರ್ ರೋಗದ ಸವಾಲುಗಳು ಮತ್ತು ಆರಂಭಿಕ ಹಂತದಲ್ಲಿ ರೋಗ ಗುರುತಿಸಿಕೊಳ್ಳುವ ಮಹತ್ವ ಮನಗಂಡು ನಗರದ ಎಂಐಒ(ಮ್ಯಾಂಗ್ಲೋರ್ ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಾಜಿ) ಆಸ್ಪತ್ರೆಯು ಡಿಜಿಟಲ್ ತಂತ್ರಜ್ಞಾನದ `ಎಂಐಒ ಕ್ಯಾನ್ಸರ್ ಸ್ಕೀನರ್ ಆ್ಯಪ್‌ನ್ನು ನಗರದ ದೀಪ ಕಂಪರ್ಟ್ ಸಭಾಂಗಣದಲ್ಲಿ ನ. 28ರಂದು ಬಿಡುಗಡೆಗೊಳಿಸಿದೆ.

ಸಮಾರಂಭದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಪರಿಸರ ಮತ್ತು ಸೇವಿಸುವ ಆಹಾರದ ಮೇಲೆ ಎಚ್ಚರ ವಹಿಸಿಕೊಳ್ಳಬೇಕಾದ ಇಂದು, ಎಲ್ಲವನ್ನೂ ಮೀರಿ ಮಾರಕ ರೋಗಗಳು ಅಂಟಿಕೊಳ್ಳುತ್ತವೆ. ಸಮಾಜಮುಖಿಯಾಗಿರುವ ಹಾಗೂ ಆರೋಗ್ಯದ ಮೇಲೆ ಕಾಳಜಿ ಇರುವ ಮಂದಿಗೆ ಈ ಆ್ಯಪ್‌ನಿಂದ ಹೆಚ್ಚಿನ ನೆರವಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ. ಸುರೇಶ್ ರಾವ್ ಮಾತನಾಡಿ, ಇದು ಸಂಪೂರ್ಣ ಉಚಿತವಾದ ಆ್ಯಪ್. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿದೆ. ಸರಳವಾಗಿರುವ ಈ ಆ್ಯಪ್‌ನಿಂದ ಗ್ರಾಮೀಣರಿಗೆ ನೆರವಾಗಬೇಕು ಎಂಬ ಉದ್ದೇಶ ಹೊಂದಲಾಗಿದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಿಕೊಂಡಲ್ಲಿ, ರೋಗ ಸಂಪೂರ್ಣ ಗುಣಮುಖ ಸಾಧ್ಯವಿದೆ. ಒಂದೆರಡು ಹಂತ ದಾಟಿದರೆ ಎಲ್ಲವೂ ಕಷ್ಟವಾಗಬಹುದು. ರೋಗದ ಬಗ್ಗೆ ಭಯ ಬಿಟ್ಟು ಆ್ಯಪ್‌ನಲ್ಲಿ ನಿಮ್ಮ ಮಾಹಿತಿ ನೀಡಿ, ರೋಗ ಲಕ್ಷಣ ಗುರುತಿಸಿಕೊಳ್ಳಿ. ನೆಗೆಟಿವ್ ಆಗಿದ್ದರೆ ಸಂತೋಷಪಟ್ಟುಕೊಳ್ಳಿ ಎಂದರು.

ಅನಿವಾಸಿ ಭಾರತೀಯ, ಸಮಾಜಸೇವಕ ಮೈಕೆಲ್ ಡಿ’ಸೋಜ ಅವರು ಆ್ಯಪ್ ಅನಾವರಣಗೊಳಿಸಿದರು. ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಎಂಎಲ್‌ಸಿ ಐವನ್ ಡಿ’ಸೋಜ, ದೈಜಿವರ್ಲ್ಡ್ ಎಂಡಿ ವಾಲ್ಟರ್ ನಂದಳಿಕೆ, ಡಾ. ವಿಶ್ವಲತಾ ಮಾತನಾಡಿದರು. `ಎಂಐಒ ಕ್ಯಾನ್ಸರ್ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು. ವೆಂಕಟರಮಣ ಕಿಣಿ ಸ್ವಾಗತಿಸಿದರು. ಜೇಷ್ಠಲಕ್ಸ್ಮಿ ನಿರೂಪಿಸಿದರು. ಹೇಮಂತ್‌ ಕುಮಾರ್ ವಂದಿಸಿದರು.

By Suddi9