ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ  ಬಿ.ಸಿ.ರೋಡು-ಧರ್ಮಸ್ಥಳ ರಸ್ತೆಯ ಕಳ್ಳಿಮಾರ್‌ನ ಇಂಜಿನಿಯರಿಂಗ್ ಶಾಪ್ ಮುಂಭಾಗದಲ್ಲಿ ಸರಣಿ ಅಪಘಾತ ಸಂಭವಿಸಿ ಮೂವರು ಗಾಯಗೊಂಡ ಘಟನೆ ಶನಿವಾರ ಸಂಜೆ ಸಂಭವಿಸಿದೆ.ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರು ಹಾಗೂ ದುರಸ್ತಿಗಾಗಿ ನಿಲ್ಲಿಸಿದ್ದ ಕ್ರೇನ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಕ್ರೇನ್ ದುರಸ್ಥಿಯಲ್ಲಿ ನಿರತರಾಗಿದ್ದ ಮ್ಯಾಕನಿಕ್ ಮಾಧವ   ಕ್ರೇನ್ ಇವರೊಂದಿಗೆ ಬೈಕ್ ನಲ್ಲಿ ಕುಳಿತ ಮಾತನಾಡುತ್ತಿದ್ದ ಪುನೀತ್ ಸಜೀಪ ಹಾಗೂ ಕಾರು ಚಾಲಕ ಪುಂಜಾಲಕಟ್ಟೆ ನಿವಾಸಿ ಯು. ಮಹಮ್ಮದ್ ಅವರು ಗಾಯಗೊಂಡಿದ್ದಾರೆ.


ಕಳ್ಳಿಮಾರ್‌ನ ಸುವರ್ಣ ಇಂಜಿನಿಯರಿಂಗ್ ಶಾಪ್ ಮುಂಭಾಗ  ರಸ್ತೆ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಿ ಅದರ ಚಾಲಕ ತೆರಳಿದ್ದರು. ಇದರ ಸಮೀಪದಲ್ಲೇ ದುರಸ್ಥಿಗಾಗಿ ಕ್ರೇನ್‌ವೊಂದನ್ನು ದುರಸ್ತಿಗಾಗಿ ನಿಲ್ಲಿಸಲಾಗಿತ್ತು. ಮೆಕ್ಯಾನಿಕ್  ಮಾಧವ ಪಿ ಅವರು ಕ್ರೇನ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರೆ, ಪುನೀತ್ ಸಜೀಪ ಅವರು ಬೈಕ್‌ನಲ್ಲಿ ಕುಳಿತು ಅವರೊಂದಿಗೆ ಮಾತನಾಡುತ್ತಿದ್ದರೆನ್ನಲಾಗಿದೆ.


ಪುಂಜಾಲಕಟ್ಟೆಯಿಂದ ಕಾರು ಚಾಲಕ ಮಹಮ್ಮದ್ ಅವರು ತನ್ನ ಪುತ್ರಿಯನ್ನು ಕೂರಿಸಿಕೊಂಡು  ಮಂಗಳೂರಿಗೆ ಸಂಚರಿಸುತ್ತಿದ್ದ ವೇಳೆ ಮಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಕ್ರೇನ್‌ಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಸುಮಾರು 100 ಮೀಟ‌ರ್ ದೂರಕ್ಕೆ ಎಸೆಯಲ್ಪಟ್ಟು ನಿಂತಿದೆ. ಅದೃಷ್ಟವಶಾತ್ ಆ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಮತ್ತೊಂದು ಅನಾಹುತ ತಪ್ಪಿದಂತಾಗಿದೆ.


ಡಿಕ್ಕಿಯ ತೀವ್ರತೆಗೆ ಕ್ರೇನ್ ದುರಸ್ತಿ ಮಾಡುತ್ತಿದ್ದ ಮಾಧವ  ಹಾಗೂ ಬೈಕ್‌ನಲ್ಲಿದ್ದ ಪುನೀತ್ ಸಜೀಪ ಅವರು ವಾಹನಗಳ ನಡುವೆ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹರಸಾಹಸಪಟ್ಟು ಇಬ್ಬರನ್ನೂ ಹೊರತೆಗೆದಿದ್ದಾರೆ. ಕಾರು ಚಾಲಕ ಯು. ಮಹಮ್ಮದ್ ಅವರಿಗೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.


ಈ ಸಂದರ್ಭ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅವರು ಅಪಘಾತವನ್ನು ಗಮನಿಸಿ  ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಿ ನೆರವಾದರು. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

By Suddi9