ನಾಲ್ಕು ದಶಕಗಳ ಸಂಘಟನಾ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲು – ಸಮಾಜಮುಖಿ ಸೇವೆಗೆ ಶಾಶ್ವತ ಕೇಂದ್ರದ ಸಾರ್ಥಕ ಕನಸು ನನಸು

ಮಂಗಳೂರು : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಬಹುದಿನಗಳ ಕನಸಾದ ನೂತನ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭವು ನವೆಂಬರ್ 15ರಂದು ಭಾನುವಾರ ಮಂಗಳೂರಿನ ವಿದ್ಯಾನಗರ, ಪಂಜಿಮೊಗರು ಪ್ರದೇಶದಲ್ಲಿ ಸರಕಾರದಿಂದ ಮಂಜೂರಾದ ಸಂಸ್ಥೆಯ ಸ್ವಂತ ನಿವೇಶನದಲ್ಲಿ ನಡೆಯಿತು.

ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ದಿವ್ಯ ಆಶೀರ್ವಚನದೊಂದಿಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ನೂತನ ಆಡಳಿತ ಕಚೇರಿಯನ್ನು ಉದ್ಘಾಟಿಸಿದರು. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರಂ ಅವರು ಗುರುಸಾನಿಧ್ಯದಲ್ಲಿ ದೀಪ ಪ್ರಜ್ವಲನೆ ನೆರವೇರಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ನಾಮಫಲಕ ಅನಾವರಣಗೊಳಿಸಿದರು.

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ನಾಲ್ಕು ದಶಕಗಳ ಸಂಘಟನಾ ಪಯಣ, ಸ್ವಂತ ಆಡಳಿತ ಕಚೇರಿಯ ನಿರ್ಮಾಣದ ಕನಸು ಹಾಗೂ ಅದನ್ನು ನನಸಾಗಿಸಲು ಸಹಕರಿಸಿದ ದಾನಿಗಳು, ಸಮಾಜದ ಬಂಧುಗಳು ಮತ್ತು ಸಂಘಟನೆಯ ಪದಾಧಿಕಾರಿಗಳ ಕೊಡುಗೆಯನ್ನು ಸ್ಮರಿಸಿ ಎಲ್ಲರನ್ನೂ ಸ್ವಾಗತಿಸಿದರು.

ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು, ಸಮಾಜದ ಉನ್ನತಿ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗೆ ಸಂಘಟಿತ ಪ್ರಯತ್ನ ಅತ್ಯಗತ್ಯ. ಶಿಕ್ಷಣ, ಸಂಸ್ಕಾರ ಮತ್ತು ಸೇವೆಯ ಮೂಲಕ ಯುವಜನತೆಯನ್ನು ಸಮಾಜಮುಖಿಯಾಗಿ ರೂಪಿಸುವ ಕಾರ್ಯದಲ್ಲಿ ಯುವವಾಹಿನಿಯ ಸೇವೆ ಶ್ಲಾಘನೀಯ ಎಂದು ಶುಭ ಹಾರೈಸಿದರು.

ನೂತನ ಆಡಳಿತ ಕಚೇರಿಯನ್ನು ಉದ್ಘಾಟಿಸಿದ ಬಿ.ಕೆ. ಹರಿಪ್ರಸಾದ್ ಅವರು, ಸಂಘಟನೆಗಳು ಜನರ ಬದುಕಿನಲ್ಲಿ ಮೂಡಿಸುವ ಸಕಾರಾತ್ಮಕ ಬದಲಾವಣೆಗಳ ಮೂಲಕ ಗುರುತಿಸಿಕೊಳ್ಳಬೇಕು. ಯುವವಾಹಿನಿಯು ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿ ಸಮಾಜದ ಅಭಿವೃದ್ಧಿಗೆ ಶಕ್ತಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು, ಯುವವಾಹಿನಿಯ ಸಂಘಟನಾ ಶಕ್ತಿ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಶ್ಲಾಘಿಸಿ, ನೂತನ ಆಡಳಿತ ಕಚೇರಿಯು ಸಂಸ್ಥೆಯ ಮುಂದಿನ ಬೆಳವಣಿಗೆಗೆ ಭದ್ರ ಬುನಾದಿಯಾಗಲಿ ಎಂದು ಶುಭ ಹಾರೈಸಿದರು.

ಪದ್ಮರಾಜ್ ಆರ್. ಪೂಜಾರಿ ಅವರು ಯುವವಾಹಿನಿಯ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಅಭಿನಂದಿಸಿ, ಸಂಸ್ಥೆಯ ಮುಂದಿನ ಸಾಧನೆಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮೆಸ್ಕಾಂ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್, ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಸೂರ್ಯಕಾಂತ್ ಜೆ. ಸುವರ್ಣ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ಗೌರವ ಉಪಸ್ಥಿತರಾಗಿ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಅನಿಲ್ ಕುಮಾರ್, ರೋಹಿತ್ ಅಮೀನ್ ಮತ್ತು ಸುಮಂಗಲಾ, ಮಾಜಿ ಸದಸ್ಯರಾದ ದೀಪಕ್ ಪೂಜಾರಿ, ವಿಕಾಸ್ ಕಾಲೇಜಿನ ಟ್ರಸ್ಟಿ ಸೂರಜ್ ಕಲ್ಯಾ, ಡಾ. ಕಿರಣ್ ಕುಮಾರ್, ರಮೇಶ್ ಪೂಜಾರಿ ಚೆಲ್ಯಾರ್, ವಿದ್ಯಾನಗರ ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಸುನೀಲ್ ಭಂಡಾರಿ, ಯುವವಾಹಿನಿ ಗೌರವ ಸಲಹೆಗಾರರಾದ ಟಿ.ಎನ್. ಪೂಜಾರಿ ಹಾಗೂ ಡಾ. ಎನ್.ಟಿ. ಅಂಚನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

1987ರ ಅಕ್ಟೋಬರ್ 2ರಂದು ಸ್ಥಾಪನೆಯಾದ ಯುವವಾಹಿನಿ ಸಂಸ್ಥೆಯು ‘ವಿದ್ಯೆ, ಉದ್ಯೋಗ, ಸಂಪರ್ಕ’ ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ, ಉದ್ಯೋಗ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 35 ಘಟಕಗಳ ಮೂಲಕ ಐದು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಸಂಸ್ಥೆಗೆ ಈ ನೂತನ ಆಡಳಿತ ಕಚೇರಿಯು ಶಾಶ್ವತ ಸಂಘಟನಾ ಕೇಂದ್ರವಾಗಿ ರೂಪುಗೊಂಡಿದೆ.

ಸರಕಾರದಿಂದ ಮಂಜೂರಾದ ಸ್ವಂತ ನಿವೇಶನದಲ್ಲಿ ಆಡಳಿತ ಕಚೇರಿಯ ನಿರ್ಮಾಣ ಕಾರ್ಯವನ್ನು ಸಾಕಾರಗೊಳಿಸಿರುವುದು ಯುವವಾಹಿನಿಯ ಇತಿಹಾಸದಲ್ಲಿ ಮಹತ್ವದ ಸಾಧನೆಯಾಗಿದೆ. ಸಂಸ್ಥೆಯ ಆಡಳಿತಾತ್ಮಕ ಚಟುವಟಿಕೆಗಳಿಗೆ ವ್ಯವಸ್ಥಿತ ವೇದಿಕೆಯನ್ನು ಒದಗಿಸುವುದರೊಂದಿಗೆ ಮುಂದಿನ ಪೀಳಿಗೆಯ ಯುವಜನರ ಸಂಘಟನಾ ಶಕ್ತಿ, ಸಾಮಾಜಿಕ ಬದ್ಧತೆ ಹಾಗೂ ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸುವ ಆಶಯ ಈ ಕಟ್ಟಡ ನಿರ್ಮಾಣದ ಹಿಂದಿದೆ.

ಈ ಮಹತ್ವದ ಯೋಜನೆಗೆ ಉದಾರವಾಗಿ ದೇಣಿಗೆ ನೀಡಿದ ದಾನಿಗಳು, ಸಹಕರಿಸಿದ ಸಮಾಜದ ಬಂಧುಗಳು, ಕೇಂದ್ರ ಸಮಿತಿ, ಕಟ್ಟಡ ಸಮಿತಿಯ ಪದಾಧಿಕಾರಿಗಳು, ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಸೇವೆ ಮತ್ತು ಸಹಕಾರವನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಯುವವಾಹಿನಿ ಕಟ್ಟಡ ಸಮಿತಿಯ ಸಂಚಾಲಕರಾದ ಹರೀಶ್ ಕೆ. ಪೂಜಾರಿ ವಂದಿಸಿದರು. ಶಾರಿಕ ಬಿ ಎಚ್ ಪ್ರಾರ್ಥನೆ ಮಾಡಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಕೋಶಾಧಿಕಾರಿ ಸತೀಶ್ ಕಿಲ್ಪಾಡಿ, ಯುವವಾಹಿನಿ ಕಟ್ಟಡ ಸಮಿತಿಯ ಕಾರ್ಯದರ್ಶಿ ಜಗದೀಶ್ ಸುವರ್ಣ, ಕೋಶಾಧಿಕಾರಿ ಜಗದೀಶ್ಚಂದ್ರ ಡಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಯುವವಾಹಿನಿಯ ನಾಲ್ಕು ದಶಕಗಳ ಸಂಘಟನಾ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ಈ ಸಮಾರಂಭವು ಸದಸ್ಯರು, ಹಿತೈಷಿಗಳು ಹಾಗೂ ಸಮಾಜ ಬಾಂಧವರ ಸಂಭ್ರಮ ಮತ್ತು ಸಂತಸಕ್ಕೆ ಸಾಕ್ಷಿಯಾಯಿತು.

By Suddi9