ಬಂಟ್ವಾಳ : ಬಾಳ್ತಿಲ ಗ್ರಾಮದ ಕಾಂಪ್ರಬೈಲು ಎಂಬಲ್ಲಿ ಮನೆಗೆ ನುಗ್ಗಿ ಸುಮಾರು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವ ನ್ಯಾಯಾಲಯಕ್ಕೆ ಶರಣಾಗಿದ್ದು, ಆತನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಕಾಂಪ್ರಬೈಲು ನಿವಾಸಿ ಸತೀಶ್ ಶೆಣೈ ಅವರು ಫೆ. 4 ರಂದು ಸಂಜೆ ಮನೆಗೆ ಬೀಗ ಹಾಕಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ರಾತ್ರಿ ಮನೆಗೆ ಹಿಂತಿರುಗಿದಾಗ ಮನೆಯ ಹಿಂಬದಿಯ ಬಾಗಿಲು ಮುರಿದಿದ್ದು,ಅನುಮಾನದಿಂದ ಮನೆಯೊಳಗೆ ಪರಿಶೀಲಿಸಿದಾಗ ಕೊಠಡಿಯ ಲಾಕರ್ನಲ್ಲಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ರೂ. ನಗದು ಕಳವಾಗಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದೀಗ 9 ತಿಂಗಳ ಬಳಿಕ ಕಳವು ಕೃತ್ಯದ ಆರೋಪಿ ಬಂಟ್ವಾಳ ತಾಲೂಕಿನ ಕೊಳ್ಳಾಡು ನಿವಾಸಿ ಮೊಹಮ್ಮದ್ ಮಿಸ್ಟಾ (21) ಎಂಬಾತ ಖುದ್ದು ನ್ಯಾಯಾಲಯಕ್ಕೆ ಶರಣಾಗಿದ್ದು,ನ್ಯಾಯಾಲಯ ಅತನನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕಳವು ಪ್ರಕರಣವೊಂದರಲ್ಲಿ ಆರೋಪಿಯೋರ್ವ ಕೃತ್ಯವನ್ನು ಒಪ್ಪಿಕೊಂಡು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದು ಅಚ್ಚರಿಗೆ ಕಾರಣವಾಗಿದೆ.
