ಬಂಟ್ವಾಳ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ‘ನ್ಯಾಯ ದೇಗುಲ’, ವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಕಾನೂನು ಸಹಿತ ಅನೇಕ ಉಪಯುಕ್ತ ಸೇವೆಗಳನ್ನು ಒದಗಿಸುತ್ತಿದೆ. ಜನರಲ್ಲಿ ಕಾನೂನಿನ ಸಾಕ್ಷರತೆ ಮೂಡಿಸುವುದರ ಜತೆಗೆ ಸಾರ್ವಜನಿಕರಿಗೆ ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಬಂಟ್ವಾಳ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ  ರಾಜೇಂದ್ರ ಪ್ರಸಾದ್ ಕೆ.ಎಸ್.ಹೇಳಿದ್ದಾರೆ.


ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ (ರಿ.) ತಾ. ಪಂ. ಬಂಟ್ವಾಳ ಹಾಗೂ ಪೊಲೀಸ್ ಇಲಾಖೆ ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಂಟ್ವಾಳಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ.,ಅವರುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ   ಪ್ರಕರಣವೊಂದರ ಉಭಯ ಪಕ್ಷಕಾರರಲ್ಲಿ ರಾಜೀ ಸಂಧಾನ ಏರ್ಪಡಿಸುವ ಮೂಲಕ ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಉಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿ ಅಥವಾ ಜಿಲ್ಲಾ,ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರವು ಜನತಾ ನ್ಯಾಯಾಲಯದ ಮೂಲಕ  ವ್ಯಾಜ್ಯವನ್ನು ಅತ್ಯಂತ ಶೀಘ್ರವಾಗಿ ಇತ್ಯರ್ಥಗೊಳಿಸಿಕೊಳ್ಳಬಹುದು ಎಂದರು.


ಪ್ರಕರಣದಲ್ಲಿ ಮಾರ್ಗದರ್ಶನ ನೀಡಿ ರಾಜಿ ಸಂಧಾನ ಏರ್ಪಡಿಸಲು ಇಬ್ಬರು ಸಂಧಾನಕಾರರಿರುತ್ತಾರೆ ಮತ್ತು ಅವರಲ್ಲಿ ಒಬ್ಬರು ನ್ಯಾಯಾಧೀಶರಿರುತ್ತಾರೆ. ಸಂಧಾನಕಾರರು ಸೂಚಿಸುವ ಪರಿಹಾರ ಉಭಯ ಪಕ್ಷಕಾರರಿಗೆ ತೃಪ್ತಿಯಾದರೆ ಮಾತ್ರ ರಾಜಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಪ್ರಯುಕ್ತ ಉಚಿತ ಕಾನೂನು ಸೇವೆಗಳ ಬಗ್ಗೆ  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ಸುಚಿತ್ರಾ. ಕೆ.,ಅವರು ಮಾಹಿತಿ ನೀಡಿದರು.


ಬಂಟ್ವಾಳ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ದಯಾನಂದ ರೈ.ಪಿ, ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಹರಿಣಿ ಕುಮಾರಿ ಡಿ., ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್, ಬಂಟ್ವಾಳ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಮಾತನಾಡಿದರು.
ತಾಲೂಕು ಪಂಚಾಯತ್‌ ಸಹಾಯಕ ನಿರ್ದೇಶಕರಾದ ವಿಜಯ್‌ ಶಂಕರ್‌ ಆಳ್ವ ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ  ವಿಶ್ವನಾಥ್‌ ಬಿ., ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು.


ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್‌,  ತಾಪಂ ವ್ಯವಸ್ಥಾಪಕ ಪ್ರಕಾಶ್‌ ಪಿ., ವಿವಿಧ ಇಲಾಖಾಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ತಾಪಂ ವಿಷಯ ನಿರ್ವಾಹಕರು,  ಎನ್‌ಆರ್‌ಎಲ್‌ಎಂ, ವಿಬಿಜಿರಾಮ್‌ಜಿ ಸಿಬ್ಬಂದಿ, ತಾಪಂ ಸಿಬ್ಬಂದಿಗಳು ,ಮತ್ತಿತರರು ಭಾಗವಹಿಸಿದ್ದರು. 

By Suddi9