ಬಂಟ್ವಾಳ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಜ್ಞಾನ ವಿಕಾಸ ಕಾರ್ಯಕ್ರಮದಡಿ ನಡೆದ ‘ಸೃಜನಶೀಲಾ’ ಕಾರ್ಯಕ್ರಮದ ಭಾಗವಾಗಿ  ‘ಮದುಮಗಳ ಶೃಂಗಾರ’ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ನಡೆಯಿತು.


ಅತಿಥಿಯಾಗಿ ಭಾಗವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ ಮಾತನಾಡಿ, ಮಹಿಳೆಯರು ಸ್ವಂತ ದುಡಿಮೆಯ ಮೂಲಕ ಜೀವನ ನಿರ್ವಹಣೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಅವಕಾಶಗಳನ್ನು ಕಲ್ಪಿಸುತ್ತಿದ್ದು, ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಿದೆ ಎಂದು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಅವರು ಸ್ವ ಉದ್ಯೋಗದ ಅವಕಾಶಗಳು, ಉದ್ಯಮ ಆರಂಭಿಸುವ ವಿಧಾನ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯುವ ಕುರಿತು ಮಾಹಿತಿ ನೀಡಿದರು. ಸ್ವ ಉದ್ಯೋಗದ ಮೂಲಕ ಸಾಧನೆ ಮಾಡಿರುವ ಉದ್ಯಮಿ ಶಮೀರಾ ಬಾನು ತಮ್ಮ ಉದ್ಯಮದ ಅನುಭವಗಳನ್ನು ಹಂಚಿಕೊಂಡರು.ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ನಾವೂರು, ಎಂಐಎಸ್ ಅಧಿಕಾರಿ ಪ್ರೇಮನಾಥ್ ಅವರು  ಯೋಜನೆಯ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.


ತರಬೇತಿ ಶಿಕ್ಷಕಿ ಶೋಭಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ, ನವಜ್ಯೋತಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಸೇವಾಪ್ರತಿನಿಧಿ ಪ್ರಫುಲ್ಲ ಹಾಗೂ ತರಬೇತಿದಾರರು ಉಪಸ್ಥಿತರಿದ್ದರು.ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ. ಸ್ವಾಗತಿಸಿದರು. ಯಶವಂತಿ ವಂದಿಸಿದರು. 

By Suddi9