ಬಂಟ್ವಾಳ: ಪ್ರಾರ್ಥಿಸುವ ಹೃದಯಕ್ಕಿಂತ ಸಹಾಯ ಮಾಡುವ ಕೈಗಳು ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ, ಸಂಕಷ್ಟದಲ್ಲಿರುವವರಿಗೆ ನೆರವಾದಾಗ ನಮ್ಮ ಕಷ್ಟಕಾರ್ಪಣ್ಯ, ರೋಗರುಜಿನಗಳು ದೂರವಾಗುತ್ತದೆ. ಈ ನಿಟ್ಟಿನಲ್ಲಿ ಸೇವಾಂಜಲಿಯ ಕಾರ್ಯ ಅದ್ವಿತೀಯ ಎಂದು ಮೇರಮಜಲು ಚರ್ಚಿನ ಧರ್ಮಗುರುಗಳಾದ ವಂ|ರೆ|ಫಾ। ವಿಲಿಯಂ ಮಿನೇಜಸ್ ಹೇಳಿದರು.

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ಹಾಗೂ ದವಸ ಧಾನ್ಯ ವಿತರಿಸಿ ಅವರು ಮಾತನಾಡಿದರು.
ಕಾಯಿಲೆ ಬಂದಾಗ ಎಚ್ಚರ ವಹಿಸಬೇಕು. ಬೇರೆಯವರಿಗೆ ಹರಡದಂತೆ ಗಮನ ಹರಿಸಬೇಕು,ಸರಿಯಾದ ಔಷಧೋಪಚಾರದ ಜತೆಗೆ ಪೌಷ್ಟಿಕಾಹಾರ ಸೇವನೆಯ ಮೂಲಕ ರೋಗ ನಿರ್ಮೂಲನೆ ಮಾಡಬೇಕು ಎಂದು ತಿಳಿಸಿದರು.
ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಮಾತನಾಡಿ 49 ತಿಂಗಳುಗಳ ಕಾಲ ನಿರಂತರವಾಗಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ಒದಗಿಸುತ್ತಿರುವ ಕೃಷ್ಣ ಕುಮಾರ್ ಪೂಂಜ ಅವರ ಸೇವಾ ಕಾರ್ಯ ದೇವರು
ಮೆಚ್ಚುವ ಕಾರ್ಯ ಎಂದು ತಿಳಿಸಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ।ಚೇತನ್ ಆರೋಗ್ಯ ಮಾಹಿತಿ ನೀಡಿದರು. ಯೇನಪೊಯ ವಿವಿ ಪ್ರಾಧ್ಯಾಪಕಿ ಡಾ|ಅನುಪಮ ನಾಯರ್, ಸಾಮಾಜಿಕ ಕಾರ್ಯಕರ್ತ ಸುನೀಲ್ ಫೆರ್ನಾಡೀಸ್ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 4 ವರ್ಷದಿಂದ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ನೀಡುತಿದ್ದು ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ಈವರೆಗೆ 264 ಮಂದಿ ಕ್ಷಯ ರೋಗಿಗಳಿಗೆ ಕಿಟ್ ವಿತರಿಸಲಾಗಿದೆ ಎಂದರು. ಸೇವಾಂಜಲಿ ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಡಾಣ್ ನಿರ್ವಹಿಸಿದರು.
