ಬಂಟ್ವಾಳ: ಬಂಟ್ವಾಳ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಾಲೋಚನಾ ಸಭೆಯು ಬುಧವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷಿಣ ಕನ್ನಡ ಹಾಲು ಒಕ್ಕೂಟವು ಕಾರ್ಯಕ್ಷಮತೆ, ಗುಣಮಟ್ಟ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ.

ಈ ಸಾಧನೆಯ ಹಿಂದೆ ಜಿಲ್ಲೆಯ ಹೈನುಗಾರರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಬದ್ಧತೆ ಮತ್ತು ಸಹಕಾರವಿದ್ದು,ಮುಂದೆಯೂ ಇದೇ ರೀತಿಯ ಸಹಕಾರವನ್ನು ನೀಡುವ ಮೂಲಕ ಒಕ್ಕೂಟದ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ನಿರ್ದೇಶಕರಾದ ಜಯರಾಮ ರೈ, ಸುಚರಿತ ಶೆಟ್ಟಿ, ನಂದರಾಮ ರೈ, ಸವಿತಾ ಎನ್. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಜೆ. ಜೈಕುಮಾರ್, ವ್ಯವಸ್ಥಾಪಕ ಡಾ. ರವಿರಾಜ ಉಡುಪ ಹಾಗೂ ಉಪವ್ಯವಸ್ಥಾಪಕಿ ಜಾನೆಟ್ ರೊಸಾರಿಯೋ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹೈನುಗಾರರ ಮಕ್ಕಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಗೌರವಿಸಲಾಯಿತು.
ಇದೇ ವೇಳೆ ಬಂಟ್ವಾಳ ತಾಲೂಕಿನಲ್ಲಿ ಉತ್ತಮ ಸಾಧನೆಗೈದು ಪ್ರಥಮ ಸ್ಥಾನ ಪಡೆದ ಕಕ್ಯಪದವು ಹಾಲು ಉತ್ಪಾದಕ ಸಹಕಾರ ಸಂಘ ಹಾಗೂ ದ್ವಿತೀಯ ಸ್ಥಾನ ಪಡೆದ ವಗ್ಗ ಹಾಲು ಉತ್ಪಾದಕ ಸಹಕಾರ ಸಂಘ ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿರ್ದೇಶಕ ಸುಧಾಕರ ರೈ ಸ್ವಾಗತಿಸಿದರು. ವ್ಯವಸ್ಥಾಪಕ ಡಾ. ರವಿರಾಜ ಉಡುಪ ವಂದಿಸಿದರು. ವಿಸ್ತರಣಾಧಿಕಾರಿ ಜಗದೀಶ್ ಎ. ಕಾರ್ಯಕ್ರಮ ನಿರೂಪಿಸಿದರು.
