ಕೈಕಂಬ: ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೬೯ರ ವಾಮಂಜೂರು ಜಂಕ್ಷನ್‌ಗೆ ಅನತಿ ದೂರದಲ್ಲಿ ಮಳೆ ನೀರು ಹರಿಯುವ ತೋಡಿಗೆ ಅಪಾರ್ಟ್ಮೆಂಟ್, ಅಂಗಡಿ-ಮುಂಗಟ್ಟು, ಮನೆಗಳ ಕೊಳಚೆ ನೀರು ಹರಿಯ ಬಿಡುತ್ತಿರುವವರ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ಮೂಲಕ ತಕ್ಷಣ ನೊಟೀಸು ಜಾರಿಗೊಳಿಸಿ ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದು ಸ್ಥಳ ಪರಿಶೀಲನೆ ನಡೆಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಸ್ಥಳಿಯರಿಗೆ ಭರವಸೆ ನೀಡಿದರು.

 

ರಾಜಕಾಲುವೆಗೆ ಗಲೀಜು ನೀರು :

ಮಳೆ ನೀರು ಹರಿಯುವ ತೋಡಿಗೆ ಕೊಳಚೆ ನೀರು ಬಿಡಲಾಗುತ್ತಿದ್ದು, ಇದು ಹತ್ತಿರದ ರಾಜಕಾಲುವೆ ಮೂಲಕ ವಾಮಂಜೂರು ಕೆಳಭಾಗದ ಗ್ರಾಮಗಳ ಮೂಲಕ ಫಲ್ಗುಣಿ ನದಿ ಸೇರುತ್ತದೆ. ತೋಡು ನಿರ್ಮಾಣಕ್ಕಿಂತ ಮುಂಚೆ ಈ ಕೊಳಚೆ ನೀರು ಎಲ್ಲಿಗೆ ಹೋಗುತ್ತಿತ್ತು ? ಇದರಿಂದ ಸುತ್ತಲ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ನದಿ ನೀರು ಕಲುಷಿತಗೊಳ್ಳುತ್ತಿದ್ದು, ಈ ನೀರು ಸರ್ಕಾರದ ಕುಡಿಯುವ ನೀರಿನ ಯೋಜನೆಗಳ ಮೂಲಕ ಗ್ರಾಮವಾಸಿಗಳಿಗೆ ತಲುಪುತ್ತದೆ. ಇದಕ್ಕೆ ತಡೆ ಹೇರಬೇಕು. ಅಂಗಡಿ-ಮುಂಗಟ್ಟು, ಅಪಾರ್ಟ್ಮೆಂಟ್, ಮನೆಯವವರು ತ್ಯಾಜ್ಯ ನೀರು ವಿಲೇವಾರಿಗೆ ಸರ್ಕಾರದ ನಿಯಮದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ತಿರುವೈಲು ನಿವಾಸಿ ಜಯಂತಿ ಡಿ. ಸುವರ್ಣ ಅವರು ಹೇಳಿದರು.

 

ವಾಮಂಜೂರಿಗೆ ಹತ್ತಿರದ ಅಪಾರ್ಟ್ಮೆಂಟ್‌ವೊಂದರಿಂದ ಭಾರೀ ಪ್ರಮಾಣದ ಗಲೀಜು ನೀರು ತೆರೆದ ತೋಡಿನ ಮೂಲಕ ಸ್ಥಳೀಯ ವಸತಿ ಪ್ರದೇಶಗಳಲ್ಲಿ ಹರಿಯುತ್ತಿದೆ. ಈ ಪ್ರದೇಶದಲ್ಲಿ ದಿನವಿಡೀ ದುರ್ವಾಸನೆ ಬೀರುತ್ತಿದೆ. ಸೊಳ್ಳೆಕಾಟ ಹೇಳತೀರದು. ನಿಯಮಾನುಸಾರಿ ಎಸ್‌ಟಿಪಿ ಮೂಲಕ ಅಪಾರ್ಟ್ಮೆಂಟ್‌ನ ತ್ಯಾಜ್ಯ ನೀರು ವಿಲೇವಾರಿಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಜೂ. ೨೨ರಂದು ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಸ್ಥಳೀಯರ ದೂರು ಆಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಮಳೆ ನೀರಿನ ಸಮಸ್ಯೆಗಾಗಿ ಎನ್‌ಎಚ್ ತೋಡು ನಿರ್ಮಿಸುತ್ತಿದೆ. ಇದಕ್ಕೆ ಯಾವುದೇ ಮನೆಗಳ ಅಥವಾ ಅಂಗಡಿ-ಮುಂಗಟ್ಟುಗಳ, ಅಪಾರ್ಟ್ಮೆಂಟ್‌ಗಳ ಕೊಳಚೆ(ಗಲೀಜು) ನೀರಿನ ಸಂಪರ್ಕ ಕೊಡುವಂತಿಲ್ಲ. ಈ ತೋಡಿನಲ್ಲಿ ಕುಡಿಯುವ ನೀರಿನ ಕೊಳವೆಗಳು ಹಾದು ಹೋಗಲಿದ್ದು, ಅದಕ್ಕೂ ಈ ಕೊಳಚೆ ನೀರಿಂದ ಸಮಸ್ಯೆ ಉಂಟಾಗಲಿದೆ. ಮೊನ್ನೆ ಮನಪಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವರದಿಯಾಧರಿಸಿ ನೋಟಿಸು ಜಾರಿ ಮಾಡಲಾಗುತ್ತದೆ ಎಂದರು.

ಅಪಾರ್ಟ್ಮೆಂಟ್‌ನ ತ್ಯಾಜ್ಯ ನೀರು ಟ್ಯಾಂಕರ್ ಮೂಲಕ ಹೊರಗೆ ಸಾಗಿಸಲಾಗುತ್ತಿದೆ. ಆದರೆ ಇಲ್ಲಿ ದುರ್ವಾಸನೆಯುಕ್ತ ಗಲೀಜು ನೀರು ಹರಿಯುತ್ತಲೇ ಸುತ್ತಲ ನಿವಾಸಿಗರಿಗೆ ತೊಂದರೆಯಾಗುತ್ತಿದೆ ಎಂಬುದು ಸತ್ಯ. ಎಲ್ಲಿಯೂ ಗಲೀಜು ನೀರು ತೆರೆದ ಪ್ರದೇಶಗಳಿಗೆ ಬಿಡುವಂತಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯವಿದೆ. ಮನಪಾದ ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಸೆಳೆದು ಸ್ಥಳೀಯವಾದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದರು.

ಶಾಸಕರ ಭೇಟಿ ಸಂದರ್ಭದಲ್ಲಿ ಮಂಗಳೂರು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಪ್ರಮುಖರಾದ ಉಮೇಶ್, ರವಿರಾಜ್, ರಘು ಸಾಲ್ಯಾನ್, ಶೇಖರ ಪೂಜಾರಿ, ಕಿಶೋರ್ ಹಾಗೂ ಸ್ಥಳೀಯ ನಿವಾಸಿಗರು ಇದ್ದರು.

By Suddi9

Leave a Reply

Your email address will not be published. Required fields are marked *