ಬಂಟ್ವಾಳ: ಆದಾಯ ತೆರಿಗೆ ಹಾಗೂ ‘ಘನ ತ್ಯಾಜ್ಯ ನಿರ್ವಹಣಾ ನಿಯಮಗಳು 2026 ಕುರಿತ ಪ್ರಗತಿ ಪರಿಶೀಲನೆ ಸಭೆ, ಕಾರ್ಯಾಗಾರ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಸಚಿನ್ ಕುಮಾರ್ ಅವರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ನರೇಗಾ ಮಾನವದಿನಗಳ ಸೃಜನೆ ಗುರಿ, ನೋಂದಾಯಿತ ಕೂಲಿಕಾರರ ಇಕೆವೈಸಿ ಪ್ರಗತಿ, ‘ನಮ್ಮ ಗ್ರಾಮ ನಮ್ಮ ಪರಂಪರೆ’, ಎಫ್‌ಟಿಕೆ, ವಸತಿ ಯೋಜನೆಗಳು, ತೆರಿಗೆ ಸಂಗ್ರಹ ಹಾಗೂ ಎಸ್‌ಬಿಎಂ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಅಗತ್ಯ ಸಲಹೆಗಳನ್ನು ನೀಡಲಾಯಿತು. ಮಳೆಗಾಲ ಆರಂಭವಾಗಿರುವುದರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕು. ಗುಡ್ಡ ಪ್ರದೇಶಗಳಲ್ಲಿ ಹಾಗೂ ಅವಘಢ ಸಂಭವಿಸುವ ಸಾಧ್ಯತೆ ಇರುವ ಸೂಕ್ಷ್ಮ ಪ್ರದೇಶಗಳಲ್ಲಿನ ಮನೆಗಳಿಗೆ ಮುಂಚಿತವಾಗಿಯೇ ಎಚ್ಚರಿಕೆ ವಹಿಸುವಂತೆ ಸೂಚಿಸಬೇಕು ಎಂದು ಇಒ ಸಚಿನ್ ಕುಮಾರ್ ಅಧಿಕಾರಿಗಳಿಗೆ ಈ ಸಂದರ್ಭ ಸೂಚನೆ ನೀಡಿದರು.
ಇದಕ್ಕೂ ಮುನ್ನ ಆದಾಯ ತೆರಿಗೆ ಕಾಯ್ದೆ 2025ರ ಅಡಿಯಲ್ಲಿ ‘ಮೂಲದಲ್ಲಿ ತೆರಿಗೆ ಕಡಿತ’ (ಟಿಡಿಎಸ್ ) ಕುರಿತು ವಿಶೇಷ ಕಾರ್ಯಾಗಾರವನ್ನು ನಡೆಸಲಾಯಿತು. ಮಂಗಳೂರು ವಾರ್ಡ್ 1ರ ಆದಾಯ ತೆರಿಗೆ ಅಧಿಕಾರಿ ಸುನಂದ ಆರ್. ಪ್ರಸಾದ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಟಿಡಿಎಸ್ ಸಲ್ಲಿಕೆ, ಟಿಡಿಎಸ್ ರಿಟರ್ನ್ ಹಾಗೂ ಹೊಸ ಸರಳ ನಿಯಮಗಳ ಕುರಿತು ಮಾಹಿತಿ ನೀಡಿದರು.
ಆಧುನಿಕ ಡಿಜಿಟಲ್ ಪೋರ್ಟಲ್ ಮೂಲಕ ಸುಲಭವಾಗಿ ಟಿಡಿಎಸ್ ರಿಟರ್ನ್ಸ್ ಸಲ್ಲಿಸುವ ವಿಧಾನದ ಬಗ್ಗೆ ಅವರು ವಿವರಿಸಿದರು.
ಇದೇ ವೇಳೆ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಹೊಸದಾಗಿ ಜಾರಿಗೆ ತಂದಿರುವ ‘ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026’ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಮಾಹಿತಿ ನೀಡಲಾಯಿತು.
ಎಸ್‌ಬಿಎಂ ಜಿಲ್ಲಾ ಸಮಾಲೋಚಕರಾದ ನವೀನ್ ಹಾಗೂ ಜಿಲ್ಲಾ ಐಇಸಿ ಸಂಯೋಜಕರಾದ ಡೊಂಬಯ್ಯ ಅವರು ಮಾಹಿತಿ ನೀಡಿ ಈ ನಿಯಮಗಳು 2026 ರ ಏ.1 ರಿಂದ ಜಾರಿಗೆ ಬಂದಿವೆ. ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026ರನ್ಚಯ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ, ಮರುಬಳಕೆ ಮತ್ತು ವೈಜ್ಞಾನಿಕ ನಿರ್ವಹಣೆಯ ಮೂಲಕ ಸ್ವಚ್ಛ ಹಾಗೂ ಆರೋಗ್ಯಕರ ಭಾರತವನ್ನು ನಿರ್ಮಿಸುವುದಾಗಿದೆ ಎಂದು ವಿವರಿಸಿದರು. ಹಿರಿಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿಸೋಜ, ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಬಿ, ವಿಜಯ್‌ಶಂಕರ್ ಆಳ್ವ , ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಚಂದ್ರಮೋಹನ್, ರಾಹುಲ್, ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಪಂ ವಿಷಯ ನಿರ್ವಾಹಕರು, ನರೇಗಾ ಸಿಬ್ಬಂದಿಗಳು ಹಾಜರಿದ್ದರು.
