ಗುರುಪುರ : ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ನೆಲ್ಲಿಕಾಡು ದುಗ್ಗಲಚ್ಚಿಲ್ ಕೊಳಪಿಲದಲ್ಲಿ ಸುಮಾರು ೫ ಎಕ್ರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ತೋಟ ಇಟ್ಟಿರುವ ಖಾಸಗಿ ವ್ಯಕ್ತಿ ವಿರುದ್ಧ ನೊಟೀಸು ಜಾರಿಗೊಳಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು ಅವರು ನೆಲ್ಲಿಕಾಡು ದುಗ್ಗಲಚ್ಚಿಲ್‌ನ ಸ್ಥಳೀಯರಿಗೆ ಭರವಸೆ ನೀಡಿದರು.

ಮೇ. ೨೬ರಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಅವರು ಸ್ಥಳೀಯ ನಾಗರಿಕರೊಂದಿಗೆ ಮಾತುಕತೆ ನಡೆಸಿ, ಸರ್ಕಾರಿ ಜಾಗವಿರುವ ನೆಲ್ಲಿಕಾಡು ದುಗ್ಗಲಚ್ಚಿಲ್-ಕೊಳಪಿಲ ಗುಡ್ಡ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಲು ಯಾವುದೇ ಅಭ್ಯಂತರವಿಲ್ಲ. ಮೊದಲಾಗಿ ಇಲ್ಲಿರುವ ಖಾಸಗಿ ಜಾಗದ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ವ್ಯಕ್ತಿಯ ಕುಟುಂಬಿಕರು ಸೌಹಾರ್ದಯುತ ಅಥವಾ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಬಳಿಕ ಆ ಜಾಗದಿಂದ ಮುಂದಕ್ಕೆ ಮುಖ್ಯರಸ್ತೆಗೆ ಸಂಪರ್ಕ ರಸ್ತೆ ನಿರ್ಮಿಸಲು ಸಾಧ್ಯವಿದೆ ಎಂದರು.

ಖಾಸಗಿ ವ್ಯಕ್ತಿಯ ತಾಯಿ ಸಹಿತ ಇಬ್ಬರು ಮಕ್ಕಳು ರಸ್ತೆ ನಿರ್ಮಿಸಲು ರಸ್ತೆ ಬಿಟ್ಟುಕೊಡುವುದಾಗಿ ಲಿಖಿತ ಭರವಸೆ ನೀಡಿದ್ದರೂ, ಅವರ ಸಹೋದರ(ಖಾಸಗಿ ವ್ಯಕ್ತಿ) ಜಾಗ ಬಿಟ್ಟುಕೊಡಲು ಆಕ್ಷೇಪವೆತ್ತಿದ್ದಾರೆ ಎಂದು ಸ್ಥಳೀಯರು ತಹಶೀಲ್ದಾರ್‌ರಿಗೆ ಮಾಹಿತಿ ನೀಡಿದರು. ಖಾಸಗಿ ವ್ಯಕ್ತಿ ನೆಲ್ಲಿಕಾಡು ದುಗ್ಗಚ್ಚಿಲ್ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಸುಮಾರು ೫ ಎಕ್ರೆ ಜಾಗ ಒತ್ತುವರಿ ಮಾಡಿಕೊಂಡು ಕಂಗು, ಬಾಳೆ ತೋಟ ಇಟ್ಟಿದ್ದಾರೆ. ಇಷ್ಟೊಂದು ಪ್ರಯತ್ನದ ಬಳಿಕವೂ ಇಲ್ಲೊಂದು ರಸ್ತೆ ನಿರ್ಮಿಸಲು ಸಾಧ್ಯವಿಲ್ಲದೆ ಹೋದಲ್ಲಿ ಖಾಸಗಿ ವ್ಯಕ್ತಿಯು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಇಟ್ಟಿರುವ ತೋಟ ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಎಲ್ಲೂ ಸರ್ಕಾರಿ ಜಾಗ ಒತ್ತುವರಿಗೆ ಅವಕಾಶವಿಲ್ಲ. ಮೂಡುಪೆರಾರದ ನೆಲ್ಲಿಕಾಡಿನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ ಆ ಬಗ್ಗೆ ಪರಿಶೀಲಿಸಲಾಗುವುದು. ಅಕ್ರಮವೆಂದಾದಲ್ಲಿ ಒತ್ತುವರಿ ತೆರವಿಗೆ ತಕ್ಷಣ ನೊಟೀಸು ಜಾರಿ ಮಾಡಲಾಗುವುದು” ಎಂದು ತಹಶೀಲ್ದಾರ್ ರಮೇಶ್ ಬಾಬು ಸ್ಥಳೀಯರಿಗೆ ಭರವಸೆ ನೀಡಿದರು.

ಮನವಿಗಳಿಗೆ ಸ್ಪಂದನೆ ಇಲ್ಲ :
ನೆಲ್ಲಿಕಾಡು ದುಗ್ಗಲಚ್ಚಿಲ್‌ನಲ್ಲಿ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಹಲವು ಬಾರಿ ಪಡುಪೆರಾರ ಗ್ರಾಪಂ, ಸಂಬAಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದ್ದರೂ, ಈವರೆಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಗ್ರಾಮಾಡಳಿತಾಧಿಕಾರಿಯವರು ಜಿಲ್ಲಾಡಳಿತಕ್ಕೆ ನೀಡಿರುವ ತಪ್ಪು ಮಾಹಿತಿಯಿಂದ ರಸ್ತೆ ನಿರ್ಮಾಣ ವಿಳಂಬವಾಗುತ್ತಿದೆ. ಈಗ ಮುಖ್ಯರಸ್ತೆ ಸಂಪರ್ಕಿಸಬೇಕಿದ್ದರೆ ೧೩ ಕಿಮೀ ಅಂತರವಿದೆ. ಇದರಿಂದ ಈಶ್ವರಕಟ್ಟೆ, ಮುಂಡಬೆಟ್ಟು, ನೆಲ್ಲಿಕಾಡು ದುಗ್ಗಚ್ಚಿಲ್, ಕೊಳಪಿಲ, ಕಾಟಿಕಂಬ್ಳ ಭಾಗದ ಶಾಲಾ ಮಕ್ಕಳು, ವಯೋವೃದ್ಧರು ಹಾಗೂ ಇತರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಒಂದೊಮ್ಮೆ ನೆಲ್ಲಿಕಾಡು-ಕೊಳಪಿಳ-ಕಾಟಿಕಂಬ್ಳವಾಗಿ ಕತ್ತಲ್‌ಸಾರ್-ಭಟ್ರಕೆರೆಯತ್ತ ಈ ರಸ್ತೆ ಮುಂದುವರಿದರೆ ಕೇವಲ ೬-೭ ಕಿಮೀ ಅಂತರದಲ್ಲಿ ಬಜ್ಪೆ-ಕಟೀಲು ಭಾಗದ ಮುಖ್ಯರಸ್ತೆ ತಲುಪಲು ಸಾಧ್ಯವಿದೆ. ಸದ್ಯ ಒಬ್ಬರ ಆಕ್ಷೇಪದಿಂದ ನೂರಾರು ಮಂದಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ತಹಶೀಲ್ದಾರ್ ಅವರಲ್ಲಿ ದೂರಿಕೊಂಡರು.
