ಬಂಟ್ವಾಳ: ಇತ್ತೀಚಿನ ಸ್ಪರ್ಧಾತ್ಮಕ ಸಮಯದಲ್ಲಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಅಳವಡಿಸಿಕೊಂಡು, ವಿನಯತೆ, ಶಿಸ್ತಿನಿಂದ ನಡೆದರೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಖ್ಯಾತ ಜೋತಿಷ್ಯರಾದ ವೇದಮೂರ್ತಿ ಭವಾನಿ ಶಂಕರ್ ಭಟ್ ಇರುವೈಲು ಅಭಿಪ್ರಾಯ ವ್ಯಕ್ತಪಡಿಸಿದರು.
ಬಂಟ್ವಾಳ ತಾಲೂಕು ಕರ್ಪೆ ಗ್ರಾಮದ ಕಿನ್ನಾಜೆ ಗಣಪತಿ ದೇವಸ್ಥಾನ ವಠಾರದಲ್ಲಿ ಶ್ರೀ ಮಹಾಗಣಪತಿ ಸೇವಾ ವೃಂದದ ವತಿಯಿಂದ ಜರಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನಗೈದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಗಾಯತ್ರಿ ಶಿವರಾಯ ಪ್ರಭು ಮಾತನಾಡಿ ಮಕ್ಕಳು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಂಡು ಶಿಕ್ಷಣ ಪಡೆಯುವ ಮೂಲಕ ಹಿರಿಯರೊಂದಿಗೆ ಗೌರವಯುತವಾಗಿ ವರ್ತಿಸಬೇಕು ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ. ರಮೇಶ್ ನಾಯಕ್ ರಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರನ್ನು ಗೌರವಿಸಲಾಯಿತು.ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು,ಸ್ಥಳೀಯ ಪ್ರಮುಖರಾದ
ಗಣೇಶ್ ಪ್ರಭು ಪಂಜಿಕಲ್ಲು, ದಯಾನಂದ ಭಟ್ ಬಾಳ್ತಿಲ, ನಿವೃತ್ತ ಶಿಕ್ಷಕರಾದ ಕೆ.ನಾರಾಯಣ ನಾಯಕ್, ದಾಮೋದರ ನಾಯಕ್,ಶಶಿಧರ ಶೆಣೈ, ಗೋಪಾಲಕೃಷ್ಣ ಪ್ರಭು, ಚಂದ್ರಶೇಖರ ಪ್ರಭು ಹೆಣ್ಣೂರು, ರವೀಂದ್ರ ನಾಯಕ್ ಬೋಳಂಗಡಿ, ರಾಮರಾಯ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸೇವಾ ವೃಂದದ ಅಧ್ಯಕ್ಷ ಸುಧಾಕರ ಪ್ರಭು ಸ್ವಾಗತಿಸಿದರು, ಶಿಕ್ಷಕ ಕೆ. ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕೆ. ರಾಮಕೃಷ್ಣ ನಾಯಕ್ ವಂದಿಸಿದರು.
