ಗುರುಪುರ : ಆರಂಭದ ಕೆಲವು ಅಡೆತಡೆಗಳ ಮಧ್ಯೆಯೂ ಕಳೆದ ೨ ವರ್ಷಗಳಿಂದ ಮಂಗಳೂರು-ಗುರುಪುರ-ಕೈಕಂಬ-ಪೊಳಲಿ-ಮಳಲಿ ಮಧ್ಯೆ ನಿರಾತಂತಕವಾಗಿ ಪ್ರಯಾಣಿಕರ ಸೇವೆಯಲ್ಲಿ ನಿರತವಾಗಿರುವ ಸರ್ಕಾರಿ ನರ್ಮ್ ಬಸ್ಗೆ ಎ. ೧೦ರಂದು ಮಳಲಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮವಾಸಿಗಳು ಪ್ರಯಾಣಿಕರ ಸುರಕ್ಷತೆ ಬಗ್ಗೆ ಶ್ರೀ ದೇವರಲ್ಲಿ ಪ್ರಾರ್ಥಿಸಿಕೊಂಡರು.

ಮಳಲಿ ಗ್ರಾಮೀಣ ರೂಟ್ನಲ್ಲಿ ಸರ್ಕಾರಿ ಬಸ್ ಆರಂಭಿಸುವಲ್ಲಿ ೨ ವರ್ಷಗಳ ಹಿಂದೆ ಸಮಾನ ಮನಸ್ಕರೊಂದಿಗೆ ಪ್ರಯತ್ನಿಸಿದ್ದ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಅವರು ಮಾತನಾಡಿ, ಮಂಗಳೂರು-ಮಳಲಿ ಮಧ್ಯ ಸೇವೆ ನೀಡುತ್ತಿರುವ ಸರ್ಕಾರಿ ನರ್ಮ್ ಬಸ್ ನಿತ್ಯವೂ ಪ್ರಯಾಣಿಕರಿಂದ ತುಂಬಿರುತ್ತದೆ. ಈಗ ಇಲ್ಲಿ ಬಸ್ ಸೇವೆ ಖಾಯಂಗೊಂಡಿದೆ. ಇದರಿಂದ ಮಳಲಿ, ನಾಡಾಜೆ, ಅರ್ಬಿ ಗ್ರಾಮೀಣ ಭಾಗದ ಶಾಲಾ ಮಕ್ಕಳ ಸಹಿತ ಇತರರಿಗೆ ಸಾಕಷ್ಟು ಪ್ರಯೋಜನವಾಗಿದೆ” ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ಕೆ. ರತ್ನಾಕರ ಭಟ್ ಪೂಜೆ ನೆರವೇರಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ, ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ, ದಾಮೋದರ ಕುಲಾಲ್, ಅಬ್ದುಲ್ ಹಮೀದ್, ಸದಾನಂದ ಮಳಲಿ, ಪ್ರೇಮಚಂದ ನಾಯಕ್, ನೀಲಯ ಪೂಜಾರಿ, ಹರೀಶ್ ಪೈ ಮಳಲಿ, ಸ್ಥಳೀಯ ಗಣ್ಯರು, ಪ್ರಯಾಣಿಕರು ಉಪಸ್ಥಿತರಿದ್ದರು. ಬಳಿಕ ಬಸ್ ಪ್ರಯಾಣಿಕರ ಸಹಿತ ಎಲ್ಲರಿಗೂ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.
