ಬಂಟ್ವಾಳ: ಕಾನೂನು ಸುವ್ಯವಸ್ಥೆ ನೆಪದಲ್ಲಿ ಅನಾದಿಕಾಲದಿಂದಲು ನಡೆದುಕೊಂಡು‌ಬರುತ್ತಿರುವ ಧಾರ್ಮಿಕ ನಂಬಿಕೆ ಮತ್ತು ಕಲೆಗೆ ತೊಂದರೆ ಕೊಡಬಾರದು,ಎಲ್ಲಾ  ಕಾರ್ಯಕ್ರಮಗಳನ್ನು ಹಿಂದಿನಂತೆ ನಡೆಸಲು ಜಿಲ್ಲಾಡಳಿತ,ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಬೇಕು ಎಂದು ಸಂಸ್ಕಾರ ಭಾರತೀಯ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಒತ್ತಾಯಿಸಿದ್ದಾರೆ.


ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಯಾವ ಜಿಲ್ಲೆಯಲ್ಲಿ ಇಲ್ಲದ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಕಠಿಣ ಕ್ರಮಗಳನ್ನು ಅನುಸರಿಸುತ್ತಿರುವುದರಿಂದ ನಮ್ಮಂಥ ನೂರಾರು ಕಲಾವಿದರು ಜೀವನೋಪಾಯಕ್ಕಾಗಿ ಯಕ್ಷಗಾನ, ನಾಟಕ ಮೊದಲಾದವುಗಳಲ್ಲಿ ತೊಡಗಿಸಿಕೊಂಡವರಾಗಿದ್ದು, ಸಮಸ್ಯೆ ಉಂಟಾಗಿದೆಯಲ್ಲದೆ ಕಲಾವಲಯವೇ ತಲ್ಲಣಗೊಂಡಿದೆ ಎಂದರು.
ಸರಕಾರದ ಈ ಧೋರಣೆಯಿಂದ ಕಲಾವಿದರ ಸಮೂಹ ಮಾತ್ರವಲ್ಲ ಲಕ್ಷಾಂತರ ಜನರ ಭಾವನೆಗೂ ಧಕ್ಕೆಯಾಗಿದೆ.ಜಿಲ್ಲೆಯ ಅಧಿಕಾರಿಗಳು  ಬಿರುದು ಪಡೆಯುವುದಕ್ಕಾಗಿಯೇ ಎಂಬಂತೆ ಕಲೆ,ಸಂಸ್ಕೃತಿಗೆ ತಡೆಯೊಡ್ಡಿ ಅಪಚಾರವೆಸಗುತ್ತಿದೆ ಎಂದು ಆರೋಪಿಸಿದ ಅವರು ಇದರಿಂದಾಗಿ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೂ ಕೊಡಲಿಯೇಟು ನೀಡುವಂತಾಗಿದೆ ಎಂದರು.
ಜಿಲ್ಲೆಯಲ್ಲಿ ಕೃಷ್ಣಾಷ್ಟಡಮಿ, ಗಣೇಶೋತ್ಸವದ ವೇಳೆ ಯಕ್ಷಗಾನ,ನಾಟಕ,ಸಾಂಸ್ಕೃತಿಕ ವೇದಿಕೆಗೆ ಪೊಲೀಸರು ತೆರಳಿ ಕಾರ್ಯಕ್ರಮ ಸ್ಥಗಿತಗೊಳಿಸಿದ್ದಾರೆ. ಮುಂದಿನ ದಸರಾ ಸಂದರ್ಭದಲ್ಲು ಪೊಲೀಸರು ಇದೇರೀತಿ ವರ್ತಿಸಿದರೆ ಜನರ ತಾಳ್ಮೆಯ ಕಟ್ಟಯೊಡೆದು ನೇಪಾಳದಂತ ಪರಿಸ್ಥಿತಿ ಉಂಟಾದರೂ ಅಶ್ಚರ್ಯ ಪಡಬೇಕಾಗಿಲ್ಲ, ಸರಕಾರದ ಈ ನಿಲುವಿನಿಂದ ಜಿಲ್ಲೆಯಲ್ಲಿ ಸದ್ಯ ಬೂದಿಮುಚ್ಚಿದ ಕೆಂಡದಂತ ಸ್ಥಿತಿಯಿದೆ ಎಂದರು.
ಯಾವುದೇ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಹಿತಕರ ಘಟನೆ,ಕಾನೂನು ಸುವ್ಯವಸ್ಥೆ ಬಿಗಡಾಯಿಸಿರುವ ಉದಾಹರಣೆ ಇಲ್ಲ,ಹಾಗಾಗಿ ಈ ಹಿಂದಿನಂತೆ ಕಾರ್ಯಕ್ರಮ ನಡೆಸಿಕೊಂಡು ಹೋಗಲು ಸರಕಾರ,ಜಿಲ್ಲಾಡಳಿತ ಅನುಮತಿ ನೀಡಬೇಕು,ಇಲ್ಲದಿದ್ದಲ್ಲಿ ಕಲಾಸಮೂಹ ಜನರ ಸಹಕಾರದೊಂದಿಗೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರಲ್ಲದೆ ಜಿಲ್ಲೆಯ ರಾಜಕಾರಣಿಗಳು, ಜನಪ್ರತಿನಿಧಿಗಳು ಈ ಕುರಿತು ರಾಜಕೀಯ ಮಾಡದೆ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ,  ಉಪಾಧ್ಯಕ್ಷ ಅನಿಲ್‌ ಪಂಡಿತ್ ಬ್ರಹ್ಮರಕೂಟ್ಟು, ಪ್ರಾಂತ ಉಪಾಧ್ಯಕ್ಷೆ ರೂಪಲೇಖ ಪುತ್ತೂರು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂಕಪ್ಪ ಶೆಟ್ಟಿ ಸಂಚಯಗಿರಿ, ಪ್ರಮುಖರಾದ ಮನ್ಮಥ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು.
ಹರೀಶ್ ಹೇಳಿಕೆಗೆ ಖಂಡನೆ:
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಗುರುವಾರ ಸುದ್ದಿಗೋಷ್ಠಿ ನಡೆಸಿರುವ ಹೇಳಿಕೆಯನ್ನು ಖಂಡಿಸಿದ ಸರಪಾಡಿ ಅಶೋಕ್ ಶೆಟ್ಟಿ ಅವರು ಹರೀಶ್ ಕುಮಾರ್ ದ.ಕ.ಜಿಲ್ಲೆಯವರಲ್ಲವೇ ಅವರಿಗೆ ಇಲ್ಲಿನ ಪರಂಪರೆ,ಸಾಂಸ್ಕೃತಿಕ ಕಾರ್ಯಕ್ರಮಗಳ ಅರಿವಿಲ್ಲವೆ?ಅವರ ಮನೆ ಅಥವಾ ಕುಟುಂಬದಲ್ಲಿ ರಾತ್ರಿ ನೇಮ,ಕೋಲ ನಡೆಯುತ್ತಿಲ್ಲವೇ, ಒರ್ವ ರಾಜಕಾರಣಿಯಾಗಿ ರಾತ್ರಿ ಹೊತ್ತು ಯಕ್ಷಗಾನ,ನಾಟಕ ,ಕೋಲ,ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ತಮ್ಮ ರಾಜಕಾರಣಕ್ಕಾಗಿ ಜಿಲ್ಲೆಯವರಾಗಿಯೇ ಇಲ್ಲಿನ ಕಲೆ,ಸಂಸ್ಕೃತಿಗೆ ಅಪಮಾನವಾದರೂ ಸಮರ್ಥಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *