ಬಂಟ್ವಾಳ: ಸ್ನೇಹ ಮಿಲನ ಕಲ್ಲಡ್ಕ ಇದರ 11ನೇ ವಾರ್ಷಿಕೋತ್ಸವ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ನಡೆಯಿತು.ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ನ ಡಾ. ಗೋಪಾಲಕೃಷ್ಣ ಆಚಾರ್ ಮಂಚಿ ಕಾರ್ಯಕ್ರಮ ಉದ್ಘಾಟಿಸಿದರು.

ಅವರು ಮಾತನಾಡಿ ಅಂತರಾಷ್ಟ್ರೀಯ ಸ್ನೇಹ ದಿನದ ದಿನವೇ ಸ್ನೇಹಕೂಟ ಆಯೋಜನೆಗೊಂಡಿರುವುದು ವಿಶೇಷ. ಸ್ನೇಹ ಮಿಲನದ ಸದಸ್ಯರು ಸಮಾಜಕ್ಕೆ ತಮ್ಮಿಂದಾಗುವ ಸೇವೆ ನೀಡಿರುವುದು ಸಂತೋಷ ತಂದಿದೆ. ಈ ಸಂಸ್ಥೆ ಗಟ್ಟಿಯಾಗಿ ಬೆಳೆಯಲಿ. ಕೃಷ್ಣ ಸುಧಾಮರ ಸ್ನೇಹದಂತೆ ಉಳ್ಳವರು, ಬಡವರು ಎನ್ನುವ ಭೇದವಿಲ್ಲದೆ ಉತ್ತಮ ಬಾಂಧವ್ಯ ಇದ್ದಾಗ ಸಂಘಟನೆ ಇನ್ನಷ್ಟೂ ಬಲಗೊಳ್ಳಲಿದೆ ಎಂದರು.
ಕಲ್ಲಡ್ಕ ಮ್ಯೂಸಿಯಂನ ಸಂಸ್ಥಾಪಕ ಮಹಮ್ಮದ್ ಯಾಸೀರ್ ಕಲ್ಲಡ್ಕ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು ಇಂತಹ ಸಂಘಟನೆಯ ಮೂಲಕ ಹೃದಯ ತಪಾಸಣ ಶಿಬಿರ ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ತನ್ನಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು.
ಸ್ನೇಹ ಮಿಲನದ ಅಧ್ಯಕ್ಷ ವಿಶ್ವನಾಥ ಅಂಚನ್ ಅಧ್ಯಕ್ಷತೆ ವಹಿಸಿದ್ದರು.ಕೇಶವ ಏಳ್ತಿಮಾರ್ ಅನಿಸಿಕೆ ವ್ಯಕ್ತಪಡಿಸಿದರು. ಸ್ಥಾಪಕ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸದಸ್ಯರಾದ ಪ್ರಶಾಂತ್ ಪೂಜಾರಿ ಬೊಳ್ಳಾಯಿ ಹಾಗೂ ಜಯಪ್ರಕಾಶ್ ರೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸದಸ್ಯರಿಗೆ ವಿವಿಧ ಮನೋರಂಜನ ಆಟಗಳು ನಡೆಯಿತು. ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
