ಬಂಟ್ವಾಳ : ತಾಲೂಕಿನ ಕೇಂದ್ರ ಸ್ಥಾನವಾದ ಬಿ..ಸಿ.ರೋಡ್ ನಲ್ಲಿರುವ ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿಯಲ್ಲಿ ಎ.೪ರಿಂದ ಎ.೯ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕದ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ  ಹಾಗೂ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಶನಿವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಕ್ಷೇತ್ರದ ತಂತ್ರಿಯವರಾದ ಬ್ರಹ್ಮಶ್ರೀ ವೇ.ಮೂ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿವರೇಣ್ಯರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನಗೈದು ತುಳುನಾಡಿನಲ್ಲಿ  ಜನರ ಜೀವನದಲ್ಲಿ ಬ್ರಹ್ಮಕಲಶಾಧಿ ಕಾರ್ಯಕ್ರಮಗಳು ಆಧ್ಯಾತ್ಮಿಕ, ಭೌತಿಕ, ದೈವಿಕವಾಗಿ ಹಾಸು ಹೊಕ್ಕಿದೆ. ದೇವಸ್ಥಾನಗಳಿಂದ ಕಲೆ, ಸಂಸ್ಕೃತಿಗಳಿಗೆ ಉತ್ತೇಜನ ದೊರಕುತ್ತದೆ. ಭಾರತೀಯ ಸನಾತನ ಸಂಸ್ಕೃತಿಯನ್ನು ಅರಿತು ಬಾಳ ಬೇಕು ಎಂದರು. 

ತನ್ನ ಮತ್ತು ದೇವರ ಮೇಲೆ ನಂಬಿಕೆ ಇರಿಸಿದಾಗ ಯಾವುದೇ ಸಾಧನೆ ಮಾಡಲು ಸಾಧ್ಯ.ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದ ಅವರು

ಇಂದು ಪ್ರಪಂಚ ಶಾಂತಿ, ಆಧ್ಯಾತ್ಮಿಕತೆಗಾಗಿ ನಮ್ಮ ದೇಶದತ್ತ ನೋಡುತ್ತಿದೆ. ನಿರಂತರ ಚಿಂತನೆಯುಳ್ಳ, ಕ್ರಿಯಾಶೀಲವಾದ ಸನಾತನವಾದ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ದೇವಸ್ಥಾನಗಳ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು. ದೇವರ ಅನುಗ್ರಹದಿಂದ ಬ್ರಹ್ಮಕಲಶೋತ್ಸವ   ಯಶಸ್ವಿಯಾಗಲಿ ಎಂದು ನುಡಿದರು.

ಬ್ರಹ್ಮ ಕಲಶೋತ್ಸವ ಸಮಿತಿ ಅದ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಹ್ಮಕಲಶೋತ್ಸವಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಹೇಳಿದರು. ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ , ಸಮಿತಿ ಸಹ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಮಾಣಿ ಬದಿಗುಡ್ಡೆ  ಅವರು ಶುಭ ಹಾರೈಸಿದರು.

ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ, ಬ್ರಹ್ಮ ಕಲಶೋತ್ಸವ ಸಮಿತಿ ಕೋಶಾಧಿಕಾರಿ ನಾರಾಯಣ ಹೆಗ್ಡೆ ಅವರು ವೇದಿಕೆಯಲ್ಲಿದ್ದರು. ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿ ಸೇವಾ ಸಮಿತಿ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಅವರು ಸ್ವಾಗತಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಐತಪ್ಪ ಪೂಜಾರಿ ವಂದಿಸಿದರು. ಮೋಹನದಾಸ ಕೊಟ್ಟಾರಿ ಹಾಗೂ ಸತೀಶ್ ಶೆಟ್ಟಿ ಮೊಡಂಕಾಪು ಕಾರ್ಯಕ್ರಮ ನಿರೂಪಿಸಿದರು.

ಬಳಿಕ ತಂತ್ರಿಯವರ ಹಾಗೂ ಕ್ಷೇತ್ರದ ಪ್ರ.ಅರ್ಚಕ ರಘುಪತಿ ಭಟ್ ಅವರ ಪೌರೋಹಿತ್ಯದಲ್ಲಿ ಬಾಲಾಲಾಯ ಪ್ರತಿಷ್ಠೆ ನಡೆಯಿತು.

By suddi9

Leave a Reply

Your email address will not be published. Required fields are marked *