
ಬಂಟ್ವಾಳ: ಬಿ.ಸಿ.ರೋಡ್ ನ ಟ್ರಾಫಿಕ್ ಸಮಸ್ಯೆ ಹಾಗೂ ವಾಹನ ದಟ್ಟಣೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ತಲಾ ಓರ್ವ ಎಎಸ್ಐ ಹಾಗೂ ಆರಕ್ಷಕ ಸಿಬ್ಬಂದಿ ಯನ್ನು ನೇಮಿಸುವಂತೆ ಒತ್ತಾಯಿಸಿ ರಿಕ್ಷಾ ಚಾಲಕ,ಮಾಲಕರ ಸಂಘ ಬಂಟ್ವಾಳ ಬಿಎಂಎಸ್ ಘಟಕದ ನಿಯೋಗ ಬಂಟ್ವಾಳ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ರಿಕ್ಷಾ ಚಾಲಕ, ಮಾಲಕರ ಸಂಘ ಬಂಟ್ವಾಳ ಬಿಎಂಎಸ್ ಘಟಕದ ಅಧ್ಯಕ್ಷರಾದ ವಿಶ್ವನಾಥ್ ಚಂಡ್ತಿಮಾರ್ ನೇತೃತ್ವದ ನಿಯೋಗ ಭಾನುವಾರ ಬಂಟ್ವಾಳ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅನಂತಪ್ರಸಾದ್ ಅವರಿಗೆ ಮನವಿಯನ್ನು ಸಲ್ಲಿಸಿ ಚರ್ಚೆ ನಡೆಸಿದರು. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ .ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಹಾಗೂ ಬಿಎಸ್ ಎನ್ ಎಲ್ ಕಚೇರಿ ಎದುರು ಮಂಗಳೂರಿಗೆ ತೆರಳುವ ಬಸ್ಸು ನಿಲುಗಡೆಯಾಗುವ ಪ್ರದೇಶದಲ್ಲಿ ಬಸ್ಸು ಹಾಗೂ ರಿಕ್ಷಾಗಳನ್ನು ನಿಲ್ಲಿಸುವುದರಿಂದ ಜನ ಸಂದಣಿಯಿಂದ ಕೂಡಿರುವ ಇಲ್ಲಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆಯಾಗುತ್ತಿದೆ ಎಂದುರಿಕ್ಷಾ ಚಾಲಕರ ನಿಯೋಗ ಇನ್ಸ್ ಪೆಕ್ಟರ್ ಅವರಿಗೆ ಮನವರಿಕೆ ಮಾಡಿತು.
ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ಮುಖ್ಯವಾಗಿ ಆಂಬ್ಯುಲೆನ್ಸ್ ಸಂಚರಿಸುವುದಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ಪಾದಚಾರಿಗಳಿಗೆ ರಸ್ತೆ ದಾಟುವ ಮಹಿಳೆಯರು, ಚಿಕ್ಕ ಮಕ್ಕಳು, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಟ್ರಾಫಿಕ್ ನಿರ್ವಹಣೆಗಾಗಿ ತಲಾ ಒರ್ವ ಪೊಲೀಸ್ ಎ.ಎಸ್ .ಐ ಹಾಗೂ ಆರಕ್ಷಕ ಸಿಬ್ಬಂದಿಯನ್ನು ನಿಯುಕ್ತಿಗೊಳಿಸುವಂತೆ ಮನವಿ ಮಾಡಿದರು. ಮನವಿಯ ಪ್ರತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಯವರಿಗೂ ರವಾನಿಸಲಾಗಿದೆ.
