ಮೂಡುಬಿದಿರೆ: ಸ್ವರಾಜ್ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಸಿಂಥೆಟಿಕ್ ಟ್ರ್ಯಾಕ್ಗೆ ರಬ್ಬರ್ ಹಾಸುವ ಕಾಮಗಾರಿಗೆ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಗುರುವಾರ ಚಾಲನೆ ನೀಡಿದರು. ಡಾಮರೀಕರಣಗೊಂಡ ಟ್ರ್ಯಾಕ್ಗೆ ,ದ್ರಾವಣ ರಬ್ಬರ್ ಹುಡಿಯ ಮೂರು ಪದರಗಳನ್ನು ಅಳವಡಿಸಿ ಬಳಿಕ ಗುಣ ಮಟ್ಟದ ವಿಶಿಷ್ಠ ವರ್ಣ ಲೇಪನವನ್ನೊಳಗೊಂಡ ಒಟ್ಟು 15 ಮಿಲಿ ಮೀಟರ್ ದಪ್ಪದ ಪದರದ ರಚನೆಯ ಈ ಕಾಮಗಾರಿ ಮೊದಲ ಹಂತ ಇದೀಗ ಆರಂಭಗೊಂಡಿದ್ದು ಒಟ್ಟು ಕಾಮಗಾರಿ ಮುಂದಿನ ಎರಡು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈಗಾಗಲೇ ಜರ್ಮನ್ ಮೂಲದ 300 ಬ್ಯಾರಲ್ ದ್ರಾವಣಾಂಶ ಮತ್ತು ತಲಾ 5 ಕ್ವಿಂಟಾಲ್ ತೂಕದ ಕಪ್ಪು ಮತ್ತು ಕೆಂಪು ರಬ್ಬರ್ ಹುಡಿಯ ಕಚ್ಛಾ ವಸ್ತುಗಳು ಈಗಾಗಲೇ ಸ್ವರಾಜ್ಯ ಮೈದಾನಕ್ಕೆ ಬಂದಿವೆ. ಸಚಿವರ ಜತೆ ಡಾ.ಎಂ. ಮೋಹನ ಆಳ್ವ , ಯುವ ಸಬಲೀಕರಣ ಇಲಾಖೆಯ ಮೇಲ್ವಿಚಾರಕ ಪ್ರವೀಣ್ ಕುಮಾರ್ ಮತ್ತಿತರರು ಟ್ರ್ಯಾಕ್ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು.
ನವದೆಹಲಿಯ ಸಿನ್ಕಾಟ್ಸ್ ಅಂತಾರಾಷ್ಟ್ರೀಯ ಕಂಪೆನಿಯು ಈ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದೆ. ಕಂಪೆನಿಯ ತಾಂತ್ರಿಕ ಸಲಹೆಗಾರ ರಾಜೇಶ್ ಶರ್ಮ ಅವರನ್ನೊಳಗೊಂಡ 22 ಮಂದಿಯ ತಂಡ ಕೆಲಸದ ಪರಿಶೀಲನೆಯಲ್ಲಿ ನಿರತವಾಗಿದೆ.
