ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ವಲಯ ಟೈಲರ್ಸ್ ಎಸೋಸಿಯೇಶನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆ ಮತ್ತು ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಹಿರಿಯ ಟೈಲರ್ ದೇವು ಶೆಟ್ಟಿಗಾರ್ ಮೊಯ್ಲೊಟ್ಟು ಇವರನ್ನು ಸನ್ಮಾನಿಸಲಾಯಿತು.
ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಟೈಲರ್ ವೃತ್ತಿ ನಡೆಸುತ್ತಿರುವ ಅಸಂಘಟಿತ ನೌಕರರಿಗೆ ಕೇರಳ ಮಾದರಿ ಸರ್ಕಾರಿ ಪಿಂಚಣಿ ಮತ್ತಿತರ ಸೌಲಭ್ಯ ಸಿಗಬೇಕು. ಇದಕ್ಕಾಗಿ ಸಂಘಟನೆ ಬಲಿಷ್ಟವಾದಾಗ ಮಾತ್ರ ಸಂಘಟಿತ ಹೋರಾಟ ನಡೆಸಲು ಸಾಧ್ಯವಾಗುತ್ತದೆ ಎಂದು ಟೈಲರ್ಸ್ ಎಸೋಸಿಯೇಶನ್ ರಾಜ್ಯಾಧ್ಯಕ್ಷ ನಾರಾಯಣ ಪಿ.ಎ.ಹೇಳಿದ್ದಾರೆ. ಇಲ್ಲಿನ ಸಿದ್ಧಕಟ್ಟೆ ವಲಯ ಟೈಲರ್ಸ್ ಎಸೋಸಿಯೇಶನ್ ವತಿಯಿಂದ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆ ಮತ್ತು ಅರ್ಹ ಸದಸ್ಯರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ನಾಲ್ಕು ಮಂದಿ ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮತ್ತು ಹಿರಿಯ ಟೈಲರ್ ದೇವು ಶೆಟ್ಟಿಗಾರ್ ಮೊಯ್ಲೊಟ್ಟು ಇವರನ್ನು ಸನ್ಮಾನಿಸಲಾಯಿತು. ಸಂಘದ ವಲಯಾಧ್ಯಕ್ಷ ವಜ್ರ ಕುಮಾರ್ ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಪೂಜಾರಿ ಹಲಕ್ಕೆ, ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಮೈಕೆಲ್ ಡಿಕೋಸ್ತ, ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿ, ಕ್ಷೇತ್ರಾಧ್ಯಕ್ಷ ಎಂ.ನಾಗೇಶ, ಕೋಶಾಧಿಕಾರಿ ತುಳಸಿ ಆರ್. ಶುಭ ಹಾರೈಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ ಸುಂದರ ಶಾಂತಿ, ಸುನಿಲ್ ಶೆಟ್ಟಿಗಾರ್, ವಿದ್ಯಾ ನಾಯಕ್ ಮತ್ತಿತರರು ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ಪೂಜಾರಿ ಇರ್ವತ್ತೂರು ವರದಿ ವಾಚಿಸಿದರು. ಸದಸ್ಯೆ ಹರಿಣಿ ಸನ್ಮಾನಿತರನ್ನು ಪರಿಚಯಿಸಿದರು. ಕೋಶಾಧಿಕಾರಿ ದಯಾನಂದ ರಾಯಿ ಲೆಕ್ಕಪತ್ರ ಮಂಡಿಸಿದರು. ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ ಸಾಲ್ಯಾನ್ ಪ್ರಾಸ್ತಾವಿಕ ಮಾತನಾಡಿದರು. ವಲಯಾಧ್ಯಕ್ಷ ದೇಜಪ್ಪ ವಿ.ಪೂಜಾರಿ ಸ್ವಾಗತಿಸಿ, ಪುಷ್ಪಾ ನಾಯಕ್ ವಾಮದಪದವು ವಂದಿಸಿದರು. ವಸಂತ ಪೂಜಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
