ಹಾಸನ: ಇಂದು ಸಾಫ್ಟ್ವೇರ್ ಐಟಿ ಬಿಟಿ ಕಂಪನಿಗಳನ್ನು ಸೇರುವ ಆಸೆಯಿಂದ ಯುವಕರು ಹಳ್ಳಿ ಬಿಟ್ಟು ನಗರ ಸೇರುತ್ತಿದ್ದಾರೆ. ಅಲ್ಲಿ ನೀಡುವ ಒಂದಿಷ್ಟು ಹಣಕ್ಕಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಆದರೆ ಇವೆಲ್ಲವನ್ನು ಬಿಟ್ಟು ಪ್ರಗತಿಪರ ರೈತನಾಗುವ ಆಸೆಯಿಂದ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ರೈತನಾಗಲು ಹೊರಟಿದ್ದಾನೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಮೀಪ ಇರುವ ಮಟ್ಟನವಿಲೆ ಎಂಬ ಗ್ರಾಮದಲ್ಲಿ ಇರುವ ಚಂದನ್ ಎಂಬ ಯುವಕ ಈ ಮೊದಲು ಸಾಫ್ಟ್ ವೇರ್ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದು ಅಲ್ಲಿ ನೀಡುವ ಪುಡಿಗಾಸು ಹಣಕ್ಕಾಗಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದರು.

ಕೊರೋನಾ ಸಂದರ್ಭದಲ್ಲಿ ನಗರ ಬಿಟ್ಟು ಹಳ್ಳಿ ಸೇರಿದ ಚಂದನ್ ಪ್ರಗತಿಪರ ರೈತನಾಗುವ ಆಸೆಯಿಂದ ವಿಶಿಷ್ಟವಾಗಿ ಬೇಸಾಯ ಮಾಡಬೇಕೆಂದು ಹೊರಟು ಗುಲಾಬಿ ಹೂವುಗಳನ್ನು ಬೆಳೆಯಲು ಪ್ರಾರಂಭಿಸಿದರು. ಇಂದು ನಮ್ಮ ಹಳ್ಳಿ ರೈತರು ಕೆಲವೇ ಕೆಲವು ಬೆಳೆಗಳಿಗೆ ಸೀಮಿತವಾಗಿ ಬೆಳೆದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಹಣ ಕಳೆದುಕೊಂಡು ಕೈಚೆಲ್ಲಿ ಕುಳಿತಿದ್ದಾರೆ, ಆದರೆ ಇವೆಲ್ಲವಕ್ಕೂ ಭಿನ್ನವಾಗಿ ಚಂದನ್ ಗುಲಾಬಿ ಹೂಗಳನ್ನು ಬೆಳೆದರು. ಇದಕ್ಕಾಗಿ ಅವರು ಹಾಕಿದ ಬಂಡವಾಳ 7 ಲಕ್ಷ ರೂಪಾಯಿಗಳು ಕೆಲವೇ ಕೆಲವು ತಿಂಗಳ ಹಿಂದೆ ಹಾಕಿದ ಬಂಡವಾಳಕ್ಕೆ ಇಂದು ಪ್ರತಿದಿನ ಎಂಟರಿಂದ ಹತ್ತು ಸಾವಿರ ಸಂಪಾದನೆ ಮಾಡುತ್ತಿದ್ದಾರೆ.

