ಮೂಡುಬಿದಿರೆ : ಇಲ್ಲಿನ ಅಂಗಡಿಯೊಂದರಿಂದ ತೋಡಾರಿನ ಗ್ರಾಹಕರೊಬ್ಬರು ಖರೀದಿಸಿದ ಎವರೆಸ್ಟ್ ಕಂಪೆನಿಯ ಸಾಂಬಾರ ಪದಾರ್ಥದ ಪ್ಯಾಕೆಟ್ನಲ್ಲಿ ಸತ್ತ ಇಲಿ ಮರಿ ಪತ್ತೆಯಾಗಿದೆ. ಒಂದು ವಾರದ ಹಿಂದೆ ಖರೀದಿಸಿದ ಈ ಸಾಂಬಾರ ಪದಾರ್ಥವನ್ನು ಸೋಮವಾರ ಮಧ್ಯಾಹ್ನ ಮಸಾಲೆಗೆ ಹಾಕಲು ತೆರೆದಾಗ ಸಣ್ಣ ಗಾತ್ರದ ಸತ್ತು ಒಣಗಿದ ಇಲಿ ಕಂಡು ಬಂದಿತ್ತು.

ಮುಂಬೈ ಮೂಲದ ಎವರೆಸ್ಟ್ ಕಂಪೆನಿಯು ಬ್ಯಾಚ್ ಇ-1463 ನಂಬರನ್ನು ಹೊಂದಿದ ನೂರು ಗ್ರಾಂ ತೂಕದ, 79 ರೂಪಾಯಿ ಮೊತ್ತದ ಮಸಾಲೆ ಪದಾರ್ಥವನ್ನು ಕಳೆದ ಸೆ.4 ರಂದು ಪ್ಯಾಕ್ ಮಾಡಿತ್ತು. ಇದರ ಬಳಕೆಯ ಅವಧಿ 2015ರ ಮೇ 15ರ ವರೆಗೆ ನಮೂದಿಸಲಾಗಿದೆ. ಬ್ರಾಂಡೆಡ್ ಕಂಪೆನಿಯು ಉತ್ಪನ್ನಗಳ ಪ್ಯಾಕೆಟ್ ಮಾಡುವ ವೇಳೆ ತೋರುವ ನಿರ್ಲಕ್ಷ್ಯವೇ ಇಂತಹ ಅಚಾತುರ್ಯಗಳಿಗೆ ಕಾರಣವಾಗುತ್ತಿದೆ.
