ಹುಬ್ಬಳ್ಳಿ: `ಕಿಸ್ ಆಫ್ ಲವ್’ ಗೆ ಗ್ರೀನ್ ಸಿಗ್ನಲ್ ನೀಡಿದ ಕೇರಳದ ಗೃಹಸಚಿವರ ಮಾತಿಗೆ ಕೆಂಡಾಮಂಡಲವಾಗಿರುವ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅ.2ರಂದು ನಡೆಯಲಿರುವ ಈ ಕಾರ್ಯಕ್ರಮದ ವಿರುದ್ಧ ಕಾನೂನು ಕೈಗೆತ್ತಿಕೊಳ್ಳಲು ಸಿದ್ದ ಎಂಬ ಹೇಳಿಕೆ ನೀಡಿದ್ದಾರೆ.

ಹುಬ್ಬಳಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತಾಡಿದ ಅವರು ಕಿಸ್ಸಿಂಗ್ ಡೇ ಕಾರ್ಯಕ್ರಮದ ವಿರುದ್ಧ ಶ್ರೀರಾಮಸೇನೆಯ ಕೇರಳ ಘಟಕದ ಕಾರ್ಯಕರ್ತರು ಇದರ ವಿರುದ್ಧ ಹೋರಾಟ ನಡೆಸಲಿದ್ದಾರೆ. ಕಿಸ್ಸಿಂಗ್ ಡೇನಂತಹ ಪ್ರವೃತ್ತಿ ಸರಿಯಲ್ಲ. ಇದು ಭಾರತೀಯ ಸಂಸ್ಕೃತಿಯಲ್ಲ. ಇದನ್ನು ಭಾರತೀಯರು ಒಪ್ಪುವುದಿಲ್ಲ. ನಮ್ಮದು ಸಂಪ್ರದಾಯಬದ್ಧ ರಾಷ್ಟ್ರ. ಹಾದಿ ಬೀದಿಯಲ್ಲಿ ಮುತ್ತಿಕ್ಕುವುದಕ್ಕೆ ನಾವು ವಿದೇಶಿಯರಲ್ಲ. ಇಂಥ ಹುಚ್ಚು ಕಾರ್ಯಕ್ರಮಗಳಿಗೆ ಸರ್ಕಾರ ಅವಕಾಶ ನೀಡಬಾರದು. ಶ್ರೀರಾಮ ಸೇನೆಯ ಕೇರಳ ಘಟಕದ ರಾಜ್ಯಾಧ್ಯಕ್ಷ ಜಯೇಷ್ ಈಗಾಗಲೇ ಕಿಸ್ಸಿಂಗ್ ಡೇ ಆಚರಣೆಗೆ ಅವಕಾಶ ನೀಡಬಾರದು ಎಂದು ಕೇರಳದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಇಷ್ಟಾಗಿಯೂ ಆಚರಣೆಗೆ ಅವಕಾಶ ನೀಡಿದ್ದೇ ಆದರೆ ಅದನ್ನು ಶ್ರೀರಾಮ ಸೇನೆ ತಡೆಯುತ್ತದೆ. ಒಂದೊಮ್ಮೆ ಗಲಾಟೆ, ಹಾನಿ ಸಂಭವಿಸದರೆ ಇದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದಿದ್ದಾರೆ.
ದೆಹಲಿಯ ಜಾಮಾ ಮಸೀದಿಯ ಮುಖ್ಯಸ್ಥ ಸೈಯ್ಯದ್ ಅಹ್ಮದ್ ಬುಖಾರಿ ತನ್ನ ಮಗನ ಉತ್ತರಾಧಿಕಾರಿ ನೇಮಕ ಸಮಾರಂಭಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವುದಿಲ್ಲ ಎಂಬ ಹೇಳಿಕೆ ಖಂಡನೀಯ. ಮೋದಿ ಅವರನ್ನು ಬುಖಾರಿ ಸಮಾರಂಭಕ್ಕೆ ಆಹ್ವಾನಿಸಬೇಕೆಂದಿಲ್ಲ. ಆದರೆ ವಿರೋಧಿ ರಾಷ್ಟ್ರ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ರನ್ನು ಅಹ್ವಾನಿಸಿ ಇಡೀ ಭಾರತ ದೇಶದ ನಿಂದನೆ ಮಾಡಿದ್ದಾರೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.
