ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲವು ಸಾಧಿಸಿದ್ದ ಬಿಜೆಪಿ, ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚಿಸುತ್ತಿದ್ದು, ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಜೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೇವೇಂದ್ರ ಫಡ್ನವಿಸ್ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಫಡ್ನವಿಸ್ಗೆ ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ್ ಅವರು ಪ್ರತಿಜ್ಞಾವಿಧಿ ಭೋದಿಸಿದರು. ಫಡ್ನವಿಸ್ ಜೊತೆ ಪಕ್ಷದ ಇತರ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಹೆಚ್ಚಿನ ಶಾಸಕರು ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸಿದರ ಶಾಸಕರು ಬೀಡ್ ಜಿಲ್ಲೆಯ ಪರ್ಲಿ ಕ್ಷೇತ್ರದ ಶಾಸಕಿ ಪಂಕಜಾ ಗೋಪಿನಾಥ್ ಮುಂಡೆ ಸಚಿವೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಭೀವಂಡಿಯ ವಾಡಾ ಕ್ಷೇತ್ರದ ಶಾಸಕ ವಿಷ್ಣು ಸಾವ್ರಾ, ಪುಣೆಯ ಕೈಂಟ್ ಕ್ಷೇತ್ರದ ಶಾಸಕ ದಿಲೀಪ್ ಕಾಂಬ್ಳೆ ಮುಂಬೈನ ಗೋರೆಗಾಂವ್ ಕ್ಷೇತ್ರದ ಶಾಸಕ ವಿದ್ಯಾಠಾಕೂರ್, ಮುಂಬೈನ ಘಾಟ್ಕೋಪರ್ ಕ್ಷೇತ್ರದ ಶಾಸಕ ಪ್ರಕಾಶ್ ಮೆಹ್ತಾ, ಮುಂಬೈನ ಬೋರಿವಿಲಿ ಕ್ಷೇತ್ರದ ಶಾಸಕ ವಿನೋದ್ ತಾವ್ಡೆ, ಜಲಗಾಂವನ್ ಮುಕ್ತಾಯಿ ಕ್ಷೇತ್ರದ ಶಾಸಕ ಏಕನಾಥ್ ಖಡ್ಸೆ ಹಾಗೂ ಸುಧೀರ್ ಎಂಬುವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
