ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಭಾನುವಾರ ರಾಜ್ಯದಲ್ಲಿಯೇ ಅತ್ಯಧಿಕ ಕೋವಿಡ್ ಪ್ರಕರಣಗಳು ದ.ಕ.ದಲ್ಲಿ ಪತ್ತೆಯಾಗಿವೆ. ಒಟ್ಟು 438 ಮಂದಿಗೆ ಕೊರೊನಾ ದೃಢಪಟ್ಟಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ರಾಜ್ಯದಲ್ಲೇ ಅತೀ ಹೆಚ್ಚಿನ ಪ್ರಕರಣ ಮತ್ತು ಸಾವು ದ.ಕ. ಜಿಲ್ಲೆಯಲ್ಲಿ ದಾಖಲಾಗಿದೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ. 4.57ಕ್ಕೇರಿದೆ. ಸಾವನ್ನಪ್ಪಿದವರು ಮಂಗಳೂರು, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನ ತಲಾ ಒಬ್ಬರು ಮತ್ತು ಮೂವರು ಹೊರ ಜಿಲ್ಲೆಯವರಾಗಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ 311 ಮಂದಿ ಗುಣಮುಖರಾಗಿದ್ದಾರೆ. ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1,03,184ಕ್ಕೆ ಏರಿಕೆಯಾಗಿದ್ದು, ಅವರಲ್ಲಿ 98,303 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1,466 ಸಾವು ವರದಿಯಾಗಿವೆ. ಪ್ರಸ್ತುತ 3,415 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 83,353 ಮಾಸ್ಕ್ ಉಲ್ಲಂಘನೆ ಪ್ರಕರಣಗಳಲ್ಲಿ 1,01,18,517 ರು. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
