ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಅಡ್ಯಾಲು ಎಂಬಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಕ್ಕಳ ಯಕ್ಷಗಾನ ಕಲಾತಂಡ “ಯಕ್ಷ ಚಿಗುರು ಕಲಾ ತಂಡ” ದ ಲೋಕಾರ್ಪಣೆ ಕಾರ್ಯಕ್ರಮ ಜ.1 ರಂದು ಅಜಿಲಮೊಗರಿನ ಜೈ ಹನುಮಾನ್ ಕಟ್ಟೆ ಬಳಿ ನಡೆಯಲಿದೆ. ಈ ಸಂದರ್ಭದಲ್ಲಿ ಸ್ಥಳೀಯ ಐದು ಸರಕಾರಿ ಶಾಲೆಗಳ ಪ್ರತಿಭಾನ್ವಿತ ಮಕ್ಕಳಿಗೆ ಸಾಧನಾಶ್ರೀ ಪುರಸ್ಕಾರ, ಇಬ್ಬರು ಸಾಧಕರಿಗೆ ಗೌರವಾರ್ಪಣೆಯು ನಡೆಯಲಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಆಶೋಕ್ ಶೆಟ್ಟಿ ಮಂಗಳವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 
ಅಂದು ಬೆಳಿಗ್ಗೆ ವಸಂತ ಭಟ್ ಪಣೆಕಲಪಡ್ಪು ಅವರ ಪೌರೋಹಿತ್ಯದಲ್ಲಿ ದುರ್ಗಾಹೋಮ ನಡೆಯಲಿದ್ದು,ಮಧ್ಯಾಹ್ನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳದ ಪ್ರಧಾನ ಅರ್ಚಕ ಲಕ್ಷ್ಮಣ ಶಾಂತಿಯವರ ಸಮ್ಮುಖದಲ್ಲಿ ಹೋಮದ ಪೂರ್ಣಾಹುತಿ ನಡೆಯುವುದು, ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. ಸಂಜೆ 3 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು, ನಂತರ ನಡೆಯುವ ಸಭಾಕಾರ್ಯಕ್ರಮವನ್ನು ಪುರೋಹಿತರಾದ ದಿನೇಶ್ ಶಾಂತಿ ಕಾಪಿಕಾಡ್ ಅವರು ಉದ್ಘಾಟಿಸುವರು.ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.ಪದ್ಮಶ್ರೀ ಪ್ರಶಸ್ತಿ ಪುರಸದಕೃತರಾದ ಅಕ್ಷರ ಸಂತ ಹರೇಕಳ ಹಾಜಬ್ಬ ಮತ್ತು ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಉಪಪ್ರಾಂಶುಪಾಲ ಉದಯಕುಮಾರ್ ಅವರನ್ನು ಗೌರವಿಸಲಾಗುವುದು ಎಂದು ಹೇಳಿದರು.
ನಂತರ ಯಕ್ಷ ಚಿಗುರು ಕಲಾತಂಡದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಈ ತಂಡದಲ್ಲಿ ಯಕ್ಷಗುರು ಶಶಿಧರ ಬಾಚಕೆರೆ ಅವರಿಂದ ತರಬೇತಿ ಪಡೆದ 1ರಿಂದ 9 ತರಗತಿಯ ವಿದ್ಯಾರ್ಥಿಗಳು ಈ ಕಲಾ ತಂಡದಲ್ಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ತಂಡದ ಸ್ಥಾಪಕ ನವೀನ್ ಶಾಂತಿ ಅಡ್ಯಾಲು,ಯಕ್ಷಗುರು ಶಶಿಧರ ಬಾಚಕೆರೆ,ಪುರುಷೋತ್ತಮ ಪೂಜಾರಿ ಮಜಲು,ವಕೀಲ ಸುಂದರ ಬಾಚಕೆರೆ,ಲೋಕೇಶ್ ಪುಣ್ಕೆದಡಿ,ನಿರಂಜನ್ ಬಾಚಕೆರೆ,ಪುರುಷೋತ್ತಮ ಕಾಯರ್ ಪಲ್ಕೆ,ಉಮೇಶ್ ಕೊಡಿಹಂಡಿರು ರವರು ಉಪಸ್ಥೊತರಿದ್ದರು.
