ಬಂಟ್ವಾಳ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ರಾಷ್ಟ್ರಾಧ್ಯಕ್ಷ ಕೆ.ಎಂ.ಶರೀಫ್ (56) ಅವರು ಕೆಲವು ದಿನಗಳ ಅಸೌಖ್ಯದಿಂದಾಗಿ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಕೈಕಂಬ ಮುಹಮ್ಮದ್ ಶರೀಫ್ ಆದ ಅವರು ಊರಿನಲ್ಲಿ ಮುಹಮ್ಮದ್ ಎಂದೇ ಪರಿಚಯಸ್ಥರಾಗಿದ್ದರು. ಬಾಲ್ಯದಲ್ಲೇ ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಸಮಸ್ತ ಕೇರಳದ ಆಧೀನ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಬಿಎಸ್ಸಿ ಪದವೀಧರ ಆಗಿರುವ ಅವರು ಖ್ಯಾತ ಧಾರ್ಮಿಕ ವಿದ್ವಾಂಸ ದಿ. ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅವರ ಶಿಷ್ಯರಾಗಿ ಧಾರ್ಮಿಕ ವಿದ್ಯಾಭ್ಯಾಸ ಪಡೆದಿದ್ದಾರೆ.
ಕೆ.ಎಫ್.ಡಿ.ಯ ರಾಜ್ಯಾಧ್ಯಕ್ಷರಾಗಿದ್ದು, ಆ ಬಳಿಕ ಕೆ.ಎಫ್.ಡಿ. ಸಂಘಟನೆ ಪಿ.ಎಫ್.ಐ.ಯೊಂದಿಗೆ ವಿಲೀನ ಆದ ಬಳಿಕ ಪಿ.ಎಫ್.ಐ.ಯ ರಾಜ್ಯಾಧ್ಯಕ್ಷರಾಗಿದ್ದರು. ಬಳಿಕ ಅವರು ಪಿ.ಎಫ್.ಐ.ಯ ರಾಷ್ಟ್ರಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ವಾಗ್ಮಿಯೂ ಆದ ಅವರು ಪ್ರಸಕ್ತ ಪಿ.ಎಫ್.ಐ. ರಾಷ್ಟ್ರೀಯ ಕೋಶಾಧಿಕಾರಿಯೂ, ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿದ್ದರು.
