ಬಂಟ್ವಾಳ: ಪುದು ಗ್ರಾಮದ ನಾಣ್ಯ ಶ್ರೀ ನಾಗರಕ್ತೇಶ್ವರಿ ಕ್ಷೇತ್ರದಲ್ಲಿ ಶ್ರೀ ಅಷ್ಟಪವಿತ್ರ ನಾಗಮಂಡಲ ಪುಣ್ಯೋತ್ಸವ ಸಮಿತಿ ವತಿಯಿಂದ ನಿರ್ಮಾಣಗೊಂಡ   ದೇವಸ್ಥಾನದ ದಕ್ಷಿಣ ಗೋಪುರದ ಸಮರ್ಪಣೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಶನಿವಾರ ಕ್ಷೇತ್ರದಲ್ಲಿ  ನಡೆಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನೂತನವಾಗಿ ನಿರ್ಮಾಣಗೊಂಡಿರುವ ದಕ್ಷಿಣ ಗೋಪುರವನ್ನು ಲೋಕಾರ್ಪಣೆಗೊಳಿಸಿದರು.
 ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ನಮ್ಮೊಳಗಿನ ದುರ್ಗುಣವೇ ನಮ್ಮ ಪರಮ ಶತ್ರು. ಆ ಶತ್ರುವನ್ನು ನಾವೇ ದೂರ ಮಾಡಬೇಕು. ಸಮಾಜದಲ್ಲಿ ಒಳ್ಳೆಯ  ಕೆಲಸ ಮಾಡುವವರಿಗೆ  ಸಹಕಾರ ನೀಡಿ,  ಸಮಾಜದ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗ ಬೇಕು. ಪ್ರೀತಿಗಿಂತ ಮಿಗಿಲಾದುದು ಯಾವುದು ಇಲ್ಲ. ಪ್ರಕೃತಿ ಯನ್ನು ಪ್ರೀತಿಸಿ, ಸಂಘರ್ಷವನ್ನು ಪ್ರೀತಿಯಿಂದ ಗೆಲ್ಲಬೇಕು, ಇದುವೇ  ಹಿಂದೂ  ತತ್ವ ಎಂದರು.
   BTW_DCE19_1A
 ನಾಗಮಂಡಲದ ಬಗ್ಗೆ ಬೇರೆ ಬೇರೆ ರೀತಿಯ ಅಪಪ್ರಚಾರಗಳು ನಡೆಯುತಿರುವ ಸಂದರ್ಭದಲ್ಲಿಯೇ ಇಲ್ಲಿ ನಾಗಮಂಡಲ ನಡೆದಿದೆ. ತುಳುನಾಡಿನಲ್ಲಿ ಇಂತಹ ಪುಣ್ಯಕಾರ್ಯಗಳು ನಡೆಯುತ್ತಿರುವುದರಿಂದಲೇ ಇಲ್ಲಿ ಪ್ರಾಕೃತಿಕ ವೈಪರಿತ್ಯಗಳು ಬರುವುದಿಲ್ಲ. ಕೊರೋನಾದಂತಹ ಮಹಾಮಾರಿ ಬಂದು ವಿಶ್ವದಾದ್ಯಂತ ಕಷ್ಟ, ನಷ್ಟಗಳು ಉಂಟಾದಗಲೂ ಇಲ್ಲಿನ ಅಡಿಕೆ, ತೆಂಗಿನಕಾಯಿ ಕೃಷಿ ಉತ್ಪನ್ನಗಳಿಗೆ  ಬೆಲೆ ಏರಿಕೆಯಾಗಿ ಇಲ್ಲಿನ ಜನರು ವ್ಯವಹಾರ ನಡೆಸಲು ಸಾಧ್ಯವಾಗಿದೆ. ಇದು ಈ ತುಳುನಾಡಿನ ಮಣ್ಣಿನ ಶಕ್ತಿ.  ಕೃತಜ್ಞತಾ ಮನೋಭಾವ, ನಾವು ಮಾಡುವ ವೃತ್ತಿಯ ಮೇಲೆ ಪ್ರೀತಿ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು.
ಶ್ರೀಅಷ್ಟಪವಿತ್ರ ನಾಗಮಂಡಲ ಪುಣ್ಯೋತ್ಸವ ಸಮಿತಿಯ ಪ್ರಧಾನ ಸಂಚಾಲಕ ತಾರನಾಥ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿ ೬ ಗ್ರಾಮದ ಜನರ ಸಹಕಾರದಿಂದಾಗಿ, ದೇವರ ಲೆಕ್ಕಚಾರದಂತೆ ಇಲ್ಲಿ ನಾಗಮಂಡಲೋತ್ಸವ ಯಶಸ್ವಿಯಾಗಿ ನಡೆದಿದೆ. ಎಲ್ಲಾ ಖರ್ಚು ವೆಚ್ಚ ಕಳೆದು ೨೪ ಲಕ್ಷ ರೂಪಾಯಿ ಹಣ ಉಳಿಕೆಯಾಗಿರುವುದು ಜಿಲ್ಲೆಯ ನಾಗಮಂಡಲೋತ್ಸವದಲ್ಲಿ ಒಂದು ಚರಿತ್ರೆಯಾಗಿದೆ ಎಂದರು.  ಕೋವಿಡ್ ಸಂದರ್ಭದಲ್ಲಿ  ೨.೬೬ ಲಕ್ಷ ರೂಪಾಯಿಯನ್ನು ಅಶಕ್ತರಿಗೆ ಆರ್ಥಿಕ ನೆರವು ನೀಡಲಾಗಿದೆ. ಕ್ಷೇತ್ರಕ್ಕೆ ಅಗತ್ಯವಿರುವ ಚೇಯರ್,  ಟೇಬಲ್ ಖರೀದಿಸಲಾಗಿದೆ. ಒಳಾಂಗಣಕ್ಕೆ  ಇಂಟರ್ ಲಾಕ್ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಗೋಪುರ ನಿರ್ಮಾಣದ ಶಿಲ್ಪಿ ಭರತ್ ಸಿದ್ದಕಟ್ಟೆ ಅವರನ್ನು  ಗೌರವಿಸಲಾಯಿತು. BTW_DCE19_1B
ಶ್ರೀಅಷ್ಟಪವಿತ್ರ ನಾಗಮಂಡಲ ಪುಣ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ, ಅಧ್ಯಕ್ಷ  ಪ್ರಕಾಶ್ಚಂದ್ರ ರೈ  ದೇವಸ್ಯ, ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ   ವಜ್ರನಾಭ ಶೆಟ್ಟಿ ಅರ್ಕುಳ ಬೀಡು, ಕಳ್ಳಿಗೆ ಶ್ರೀ ಕನಪ್ಪಾಡಿತ್ತಾಯ ದೈವಸ್ಥಾನದ ಆಡಳಿತ ಮೋಕ್ತೇಸರ ರಾಜಶೇಖರ ರೈ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ,  ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ,  ಆಡಳಿತ ಸಮಿತಿ ಅಧ್ಯಕ್ಷ ಪೂವಪ್ಪ ಬಂಗೇರ, ಕಾರ್ಯದರ್ಶಿ ಮಾಧವ ನಾಣ್ಯ ಉಪಸ್ಥಿತರಿದ್ದರು. ಕಾರ್ಯಧ್ಯಕ್ಷ  ಚಂದ್ರಹಾಸ ಶೆಟ್ಟಿ ರಂಗೋಲಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ  ವಂದಿಸಿದರು. ಜಗದೀಶ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ರಕ್ಷೋಗ್ನ ಹೋಮ, ವಾಸ್ತು ಹೋಮ, ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

By suddi9

Leave a Reply

Your email address will not be published. Required fields are marked *