ಮೂಡುಬಿದಿರೆ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದಿದ್ದು, ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪ್ರಸಾದ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಸುಜಾತ ಆಯ್ಕೆಯಾಗಿದ್ದಾರೆ.
2019ರಲ್ಲಿ ಮೂಡುಬಿದಿರೆ ಪುರಸಭೆ ಎಲ್ಲ 23 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 11 ಸ್ಥಾನ ಹಾಗೂ ಬಿಜೆಪಿ 12 ಸ್ಥಾನಗಳನ್ನು ಗಳಿಸಿತ್ತು. ಈ ಹಿಂದೆ ಕಾಂಗ್ರೆಸ್ನ ಪ್ರಾಬಲ್ಯವಿದ್ದ ಪುರಸಭೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಪಡೆದಿದೆ.
ಸಾಮಾನ್ಯ ಮೀಸಲಾತಿಯನ್ನು ಪಡೆದಿರುವ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್-14 ಮಾಸ್ತಿಕಟ್ಟೆಯ ಪ್ರಸಾದ್ ಕುಮಾರ್ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಮೂರನೇ ಬಾರಿಗೆ ಸತತವಾಗಿ ಸದಸ್ಯರಾಗಿರುವ ಪ್ರಸಾದ್ ಕುಮಾರ್ ಸಧ್ಯ ಪುರಸಭೆಯಲ್ಲಿರುವ ಬಿಜೆಪಿಯ ಹಿರಿಯ ಸದಸ್ಯರಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲಾತಿ ಪ್ರಕಟಗೊಂಡಿದ್ದು, ಶನಿವಾರ ವಾರ್ಡ್19 ಸುಜಾತ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಪಿ.ಕೆ ಥೋಮಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಮತಾ ನಾಮಪತ್ರ ಸಲ್ಲಿಸಿದ್ದರು.
