ಬಂಟ್ವಾಳ: ತಾಲೂಕಾಡಳಿತ ವತಿಯಿಂದ 65 ನೇ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ,ಶುಭ ಸಂದೇಶ ನೀಡಿದ ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್. ಕನ್ನಡವನ್ನು ಪ್ರೀತಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ರಾಜ್ಯೋತ್ಸವ ಸಂದರ್ಭ ಕನ್ನಡ ನಾಡುಕಟ್ಟಿದ ಮಹಾಪುರುಷರ ಸ್ಮರಣೆ ಮಾಡಬೇಕು, ಬಂಟ್ವಾಳ ತಾಲೂಕಿನವರೇ ಆದ ಪಂಜೆ ಮಂಗೇಶ್ ರಾವ್, ಏರ್ಯ ಲಕ್ಷ್ಮೀನಾರಾಯಣ ಆಳ್ವರಂಥ ಅನೇಕರು ಬಾಷಾ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.
IMG-20201101-WA0036
ಸಭಾಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಮಾತನಾಡಿ,ರಾಜ್ಯೋತ್ಸವ ಸಂದರ್ಭದಲ್ಲಿ ಗ್ರಾಮೀಣಪ್ರತಿಭೆಯನ್ನು ಗುರುತಿಸಿ ಸನ್ಮಾನಿಸುವುದು ಉತ್ತಮ ಕಾರ್ಯ,ಕನ್ನಡ ನಾಡು,ನುಡಿಗಾಗಿ ಹೋರಾಡಿದ ಮಹನೀಯರನ್ನು ನೆನಪಿಸುವುದರ ಜೊತೆಗೆ ಗ್ರಾಮೀಣಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದು ಇಂದಿನ ಅಗತ್ಯ ಎಂದರು.  ಶಿಕ್ಷಕ ವಿಠಲ ನಾಯಕ್ ಅವರು ಪ್ರಧಾನಭಾಷಣಗೈದು,ಕನ್ನಡ ಉಳಿದರೆ,ಕನ್ನಡ ಸಂಸ್ಕೃತಿಯು ಉಳಿಯುತ್ತದೆ.ವಿದ್ಯಾಸಂಸ್ಥೆಗಳು ಚಿತ್ತಾಕರ್ಷಕವಾಗಬೇಕೆ ವಿನಹ ವಿತ್ತಾಕರ್ಷಕವಾಗಬಾರದು  ಉತ್ತಮ ಸಾಹಿತ್ಯ ಸಿಗದೇ ಇರುವುದು ಇಂದಿನ ಮಕ್ಕಳ ಮನಸ್ಸು ಕಲುಷಿತಗೊಳಿಸಿದೆ.ಕನ್ನಡ ಮಾಧ್ಯಮದಲ್ಲಿ ಕಲಿತರೆ ಪ್ರಯೋಜನವಿಲ್ಲ ಎಂಬ ಭ್ರಮೆಯಿಂದ ವಿದ್ಯಾರ್ಥಿಗಳು, ಪೋಷಕರು ಹೊರಬರಬೇಕಿದೆ ಎಂದರು.
IMG-20201101-WA0034
ಇದೇ ವೇಳೆ ಜಾವೆಲಿನ್ ಎಸೆತದಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಸಿದ್ದಕಟ್ಟೆ ಗುಣಶ್ರೀ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಅವರನ್ನು ಸನ್ಮಾನಿಸಲಾಯಿತು.ಹಾಗೆಯೇ ಸರಕಾರಿ ಪ್ರೌಢಶಾಲೆಯಲ್ಲಿ ಕಲಿತು ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಅನಿರುದ್ದು,ಲತಾ ಎಚ್.,ಪ್ರತೀಕ್ಷಾ ಎಚ್.ಎಸ್.ಅವರಿಗೆ ಲ್ಯಾಪ್ ಟ್ಯಾಪ್ ವಿತರಿಸಲಾಯಿತು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ,ಉಪಾಧ್ಯಕ್ಷ ಅಬ್ಬಾಸ್ ಆಲಿ,ಬಂಟ್ವಾಳ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.
IMG-20201101-WA0051
ಸಿಡಿಪಿಒಗಳಾದ ಗಾಯತ್ರಿ ಆರ್.ಕಂಬಳಿ,ಸುಧಾಜೋಶಿ,ಸಬ್ ರಿಜಿಸ್ಟ್ರಾರ್ ಕವಿತಾ,ಡಿವೈಎಸ್ಪಿ ವೆಲಂಟೈನ್ ಡಿಸೋಜ ಮೊದಲಾದವರು ವೇದಿಕೆಯಲ್ಲಿದ್ದರು.ಶಿಕ್ಷಣಾಧಿಕಾರಿ ಜ್ಞಾನೇಶ್ ಸ್ವಾಗತಿಸಿದರು.ಕಂದಾಯ ನಿರೀಕ್ಷಕ ರಾಮಕಾಟಿಪಳ್ಳ ವಂದಿಸಿದರು.ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *