ಬಂಟ್ವಾಳ : ತಾಲೂಕಿನ ಕಲ್ಲಡ್ಕ ಪರಿಸರದಲ್ಲಿ ಅನಾಥವಾಗಿ ಕೆಲವು ದಿನಗಳಿಂದ ಸುತ್ತಾಡುತ್ತಿದ್ದ ಗಂಡು ಕರುವನ್ನು ರಕ್ಷಣೆ ಮಾಡಿ ಪಿಕಪ್ ವಾಹನದಲ್ಲಿ ಗೋ ಶಾಲೆಗೆ ಸಾಗಿಸಲು ಮುಂದಾದ ಘಟನೆಯನ್ನು ತಿರುಚಿ ವರದಿ ಮಾಡುವ ಮೂಲಕ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಲಾಗಿದೆ. ಇದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೋ ಪ್ರಮುಖ್ ಸರಪಾಡಿ ಅಶೋಕ್ ಅವರು ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಕಲ್ಲಡ್ಕದಲ್ಲಿ ನವೀನ್ ಕುದ್ರೆಬೆಟ್ಟು ಮತ್ತು ಮಾಧವ ಸುಧೆಕ್ಕಾರು ಎಂಬವರು ಬಿಡಾಡಿ ದನ ಎಂದು ಕರುವನ್ನು ರಕ್ಷಣೆಗೆ ಮುಂದಾಗಿದ್ದರು ಎಂದರು.ಅವರಿಬ್ಬರು ಸಂಘಟನೆಯ ಜವಾಬ್ದಾರಿಯತ ಕಾರ್ಯಕರ್ತರಾಗಿದ್ದು, ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಬಳಿಕ ಈ ಗೋವನ್ನು ಮುಡಿಪು ಗೋಶಾಲೆಗೆ ತಲುಪಿಸಲು ಸೂಚಿಸಲಾಗಿತ್ತು.ಅದರಂತೆ ಅವರಿಬ್ಬರು ಕಾರ್ಯಪೃವತ್ತರಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬರು ಅದು ತನಗೆ ಸೇರಿದ ಕರು ಎಂದಿದ್ದು,ಸ್ಥಳದಲ್ಲಿ ಜನ ಜಮಾಯಿಸಿತ್ತು.ಅದಾಗಲೇ ಸ್ಥಳಕ್ಕೆ ಬಂದ ಪೊಲೀಸರು ಕರುವಿನ ಮಾಲಕ ಮತ್ತು ರಕ್ಷಣೆ ಮುಂದಾದವರನ್ನು ಠಾಣೆಗೆ ಕರೆಸಿಕೊಂಡು ಸಮಸ್ಯೆಯನ್ನು ಇತ್ಯರ್ಥ ಮಾಡಿದ್ದಾರೆ ಎಂದರು.
ಆದರ ಬಳಿಕ ಈ ಘಟನೆಯನ್ನು ಬಜರಂಗದಳದ ಕಾರ್ಯಕರ್ತರಿಂದ ಗೋ ಕಳ್ಳತನಕ್ಕೆ ಯತ್ನ ಎಂಬುದಾಗಿ ಸುದ್ದಿ ಮಾಡುವ ಮೂಲಕ ಸಾಮಾಜಿಕ ಜಾಲತಾಣ ಮತ್ತು ಕೆಲ ಪತ್ರಿಕೆಗಳಲ್ಲಿ ಅಪಪ್ರಚಾರ ಮಾಡಲಾಗಿದೆ. ಇದು ಸಂಘಟನೆಗಳಿಗೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿದೆ ಎಂದರು. ಯಾವುದೇ ಅಕ್ರಮ ಚಟುವಟಿಕೆಯನ್ನು ತಡೆಯುವ ದೀಕ್ಷೆಯನ್ನು ಪಡೆದ ವಿಹಿಂಪ,ಬಜರಂಗದಳ ಕಾರ್ಯಕರ್ತರ ಸಾಮಾಜಿಕ ಚಟುವಟಿಕೆಯನ್ನು ಹತ್ತಿಕ್ಕುವ ಷಡ್ಯಂತ್ರವನ್ನು ಸಹಿಸಲು ಸಾಧ್ಯವಿಲ್ಲ,ಇದನ್ನು ಯಾವ ರೂಪದಲ್ಲಾದರೂ ಪ್ರತಿರೋಧಿಸಲಾಗುವುದು ಎಂದು ಆಶೋಕ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ನ ವಿಟ್ಲ ಪ್ರಖಂಡದ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ,ಬಜರಂಗದಳದ ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ್, ಗೋರಕ್ಷ ಪ್ರಮುಖ್ ಮಹೇಶ್ ಬಜೆತ್ತೂರು ಉಪಸ್ಥಿತರಿದ್ದರು.
