ಬಂಟ್ವಾಳ: ಬಂಟ್ವಾಳ ಜೈನ್ ಮಿಲನ್ ಹಾಗೂ ಯುವ ಜೈನ್ ಮಿಲನ್ ವತಿಯಿಂದ ಮಾರ್ನೆಮಿದ ಪುದ್ದರ್ (ಸಾಮೂಹಿಕ ಹೊಸ ಅಕ್ಕಿ ಊಟ) ಹಾಗೂ ಯಕ್ಷಗಾನ ತಾಳ ಮದ್ದಲೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.ಮುಖ್ಯ ಅತಿಥಿ ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ನಾವು ವಿಶಾಲ ಮನೋಭಾವದಿಂದ ಕೆಲಸ ಮಾಡಿದಾಗ ಸಂಘಟನೆಗಳು ವಿಶಾಲವಾಗಿ ಬೆಳೆಯಲು ಸಾಧ್ಯ. ಜೈನ್ ಮಿಲನ್ ಗಳು ಸಂಘಟನೆ ದೃಷ್ಟಿಯಿಂದ ತಿಂಗಳಿಗೊಂದು ಕಾರ್ಯಕ್ರಮ ಆಯೋಜಿಸುವುದು ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ರಮ ಸುಸೂತ್ರವಾಗಿ ನಡೆಸಲು ಸಂಘಟನೆ ತಯಾರಿ ನಡೆಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ. ಸುದೀಪ್ ಕುಮಾರ್ ಸಿದ್ಧಕಟ್ಟೆ ಮಾತನಾಡಿ, ನವರಾತ್ರಿಯ ಶುಭ ಸಂದರ್ಭ ಈ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ವೇಳೆ ತಾಳ ಮದ್ದಲೆ ಆಯೋಜಿಸುವ ಮೂಲಕ ಪೌರಾಣಿಕ ಕತೆ ತಿಳಿದುಕೊಳ್ಳುವುದಕ್ಕೆ ನೆರವಾಗಿದೆ ಎಂದರು.
ಭಾಷಾ ವಿದ್ವಾಂಸ ಮುನಿರಾಜ ರೆಂಜಾಳ, ಬಂಟ್ವಾಳ ಜೈನ್ ಮಿಲನ್ ಮಾಜಿ ಕಾರ್ಯದರ್ಶಿ ಉದಯಕುಮಾರ್ ಜೈನ್ ಮಧ್ವ, ಪುತ್ತೂರು ಜೈನ್ ಮಿಲನ್ ಕಾರ್ಯದರ್ಶಿ ಸತೀಶ್ ಕುಮಾರ್ ಪಡಿವಾಳ್, ಭರತ್ ರಾಜ್ ಜೈನ್ ವೇಣೂರು, ಡಾ. ಪ್ರಭಾತ್ ಕುಮಾರ್ ಜೈನ್, ಸುಧಾಕರ್ ಜೈನ್, ಕಾರ್ಯದರ್ಶಿ ಸನ್ಮತಿ ಜೈನ್ ವೇದಿಕೆಯಲ್ಲಿದ್ದರು. ಹವ್ಯಾಸಿ ಕಲಾವಿದ ಡಾ. ಶ್ರುತಕೀರ್ತಿ ಜೈನ್ ಅಭಿಪ್ರಾಯ ವ್ಯಕ್ತಪಡಿಸಿದರು.ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಲೆ ನಡೆಸಿಕೊಟ್ಟ ಜೈನ ಸಮುದಾಯ ಕಲಾವಿದರು ಹಾಗೂ ಯುವ ಪ್ರತಿಭೆ ನಿಶಿತ್ ಕುಮಾರ್ ಇಂದ್ರ ಅವರನ್ನು ಗೌರವಿಸಲಾಯಿತು. ಬಂಟ್ವಾಳ ಜೈನ್ ಮಿಲನ್ ಮಾಜಿ ಅಧ್ಯಕ್ಷ ಆದಿರಾಜ ಜೈನ್ ಸ್ವಾಗತಿಸಿದರು. ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ವಂದಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ಯೋಜನೆಗಳ ನೋಂದಣಿ ನಡೆಯಿತು.
