ಶ್ರೀನಿವಾಸಪುರ: ಈಚೆಗೆ ಹಳೆ ವೈಷಮ್ಯದ ನಿನ್ನೆಲೆಯಲ್ಲಿ ತಾಲ್ಲೂಕು ಮಾದಿಗ ದಂಡೋರ ಸಂಘಟನೆಯ ಅಧ್ಯಕ್ಷ ಬಿ.ಶಂಕರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಎಲ್ಲ ಆರೋಪಿಗಳನ್ನೂ ಬಂಧಿಸಬೇಕು ಎಂದು ರಾಜ್ಯ ಮಾದಿಗ ದಂಡೋರ ಸಂಘಟನೆಯ ಮಾದಿಗ ಮೀಸಲಾತಿ ಘಟಕದ ಅಧ್ಯಕ್ಷ ಬಿ.ನರಸಪ್ಪ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳ ಪೈಕಿ ಒಬ್ಬರನ್ನು ಬಂಧಿಸಲಾಗಿದೆ. ಇನ್ನೊಬ್ಬರನ್ನು ಕೊರೊನಾ ಹೆಸರಲ್ಲಿ ರಕ್ಷಿಸಲಾಗಿದೆ. ಉಳಿದ ಮೂವರು ಆರೋಪಿಗಳು ಗ್ರಾಮದಲ್ಲಿ ನಿರಾತಂಕದಿಂದ ಇದ್ದಾರೆ ಎಂದು ಹೇಳಿದರು.ಆರೋಪಿಗಳನ್ನು ಬಂದಿಸದಿರುವುದರ ಹಿಂದೆ ಸ್ಥಳೀಯ ಶಾಸಕರು ಹಾಗೂ ಪೊಲೀಸರ ಕೈವಾಡವಿದೆ. ಹಾಗಿಲ್ಲವಾದರೆ ಹಲ್ಲೆಗೆ ಕಾರಣರಾದ ವ್ಯಕ್ತಿಗಳು ರಾಜಾರೋಷವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಲು ಸಾಧ್ಯವಿರಲಿಲ್ಲ. ಆರೋಪಿಗಳ ಪರ ವಹಿಸಿರುವ ಮುಖಂಡರಿಗೆ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದರು.
ಹಲ್ಲೆಗೆ ಒಳಗಾಗಿರುವ ಬಿ.ಶಂಕರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಲಿತ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆದಿದ್ದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾಗಲಿ, ಡಿಎಸ್‌ಡಬ್ಲು್ಯ ಅವರಾಗಲಿ ಭೇಟಿ ನೀಡಿ ವಿಚಾರಿಸಿಲ್ಲ ಎಂದು ಆಪಾದಿಸಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಹಲ್ಲೆಗೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನೂ ಬಂಧಿಸದಿದ್ದಲ್ಲಿ ಅ.7 ರಂದು ಆವಲಕುಪ್ಪ ಗ್ರಾಮದಿಂದ ದಲಿತ ಸಂಘಟನೆಗಳ ಕಾರ್ಯಕರ್ತರು ಕಾಲ್ನಡಿಗೆ ಜಾಥಾ ನಡೆಸಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡಲಿದ್ದಾರೆ ಎಂದು ಹೇಳಿದರು.
ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಿ.ವಿ.ವೀಣಾ, ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್, ಉಪಾಧ್ಯಕ್ಷ ಆರ್.ವೇಣು ಮಾತನಾಡಿ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂದಿಸುವಂತೆ ಒತ್ತಾಯಿಸಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ಎಸ್.ಶಶಿಕಲಾ, ಮಂಜುಳ, ಚಾಮರಾಜ್, ರಾಮಪ್ಪ, ವೆಂಕಟೇಶ್, ಮಂಜುನಾಥ್, ವೆಂಕಟರಮಣ ಇದ್ದರು.
