ಬಂಟ್ವಾಳ: ತಾಲೂಕಿನ ಕೊಯಿಲ ಗ್ರಾಮದ ಕೊಯಿಲ ಗುತ್ತು ಎಂಬಲ್ಲಿನ ರಾಘವೇಂದ್ರ ರಾವ್ ರವರ ೫.೦೦ ಎಕ್ರೆ ಹಡೀಲು ಜಮೀನಿನಲ್ಲಿ ನಾಟಿ ಯಂತ್ರದ ಮೂಲಕ ಭತ್ತದ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸುಮಾರು ೪ ವರ್ಷಗಳಿಂದ ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ಬೇಸಾಯ ಮಾಡದೇ ಕೃಷಿ ಭೂಮಿಯು ಹಡೀಲು ಭೂಮಿಯಾಗಿತ್ತು. ಈ ಹಡೀಲು ಗದ್ದೆಯಲ್ಲಿ ನಾಟಿ ಮಾಡುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಎಂಒ4 ಅಧಿಕ ಇಳುವರಿಯ ತಳಿ ಬಿತ್ತನೆ ಬೀಜ, ಕೃಷಿ ಸುಣ್ಣ ಹಾಗೂ ಸಾವಯವ ಗೊಬ್ಬರವನ್ನು ವಿತರಿಸಲಾಗಿತ್ತು.ಬೆಳ್ತಂಗಡಿಯ ನಡ ಗ್ರಾಮದ ಪ್ರಗತಿಪರ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಪ್ರಭಾಕರ ಮಯ್ಯರವರು ಈ ಸಂದರ್ಭ ರೈತರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಕೆ. ನಾರಾಯಣ ಶೆಟ್ಟಿಯವರು ತಾಂತ್ರಿಕ ಮಾಹಿತಿ ನೀಡಿದರು ಹಾಗೆಯೇ ಸಹಾಯಕ ಕೃಷಿ ಅಧಿಕಾರಿ ನಾರಾಯಣ ನಾಯ್ಕ ಇವರು ಮೇಲು ಗೊಬ್ಬರಗಳ ಬಳಕೆ ಮತ್ತು ಭತ್ತದ ಬೆಳೆಯಲ್ಲಿ ಸಸ್ಯ ಸಂರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಸ್ಥಳೀಯ ರೈತರಾದ ಹರ್ಷೆಂದ್ರ ಹೆಗ್ಡೆ ಹಾಗೂ ಸುತ್ತಮುತ್ತಲಿನ ರೈತರು ಯಂತ್ರ ನಾಟಿಯ ಮಾಹಿತಿಯನ್ನು ಪಡೆದುಕೊಂಡರು.
