ಮಂಗಳೂರು: 11 ಅಗ್ನಿಕುಂಡಗಳಲ್ಲಿ 1008 ಮಂದಿ ಮುತ್ತೈದೆಯರು, ಊರು-ಪರವೂರಿನಿಂದ ಸಾಗಿಬಂದ ಮಹಿಳೆಯರು ಮತ್ತು ಹೆಣ್ಮಕ್ಕಳು ಬೆಳ್ತಂಗಡಿಯ ತಾಲೂಕು ಮೈದಾನದಲ್ಲಿ ನೆರೆದ ಜನಸಾಗರದ ಮಧ್ಯೆ ಸ್ತ್ರೀ ರಕ್ಷಣೆಯ ಸಂಕಲ್ಪ ತೊಟ್ಟರು. ಚಿಕ್ಕಮಂಗಳೂರಿನ ಆಧ್ಯಾತ್ಮ ಗುರು ಕೆ.ಎಸ್.ನಿತ್ಯಾನಂದ ನೇತೃತ್ವದಲ್ಲಿ ನಡೆದ ಹೆಣ್ಮಕ್ಕಳ ರಕ್ಷಣೆ, ಜಾಗೃತಿಗಾಗಿ `ದುರ್ಗಾ ನವಚಂಡಿಕಾ ಯಾಗ’ಕ್ಕೆ ಸಹಸ್ರಾರು ಮಂದಿ ಸಾಕ್ಷಿಯಾದರು.
ಧರ್ಮಸ್ಥಳದ ಪಾಂಗಳ ನಿವಾಸಿ ಎಸ್ಡಿಎಂ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಕಳೆದ 2013ನೇ ಇಸವಿಯ ಅಕ್ಟೋಬರ್ 9ರಂದು ನಾಪತ್ತೆಯಾಗಿ 10ರಂದು ಪಾಂಗಳ ರಸ್ತೆ ಪಕ್ಕದ ಗುಡ್ಡ ಪ್ರದೇಶದಲ್ಲಿ ಅಮಾನುಷ ಅತ್ಯಾಚಾರಕ್ಕೀಡಾಗಿ ಶವವಾಗಿ ಪತ್ತೆಯಾಗಿದ್ದಳು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಶುಕ್ರವಾರಕ್ಕೆ ಎರಡು ವರ್ಷ ವಿಠಲದಾಸ ಸ್ವಾಮೀಜಿಗಳ ನೇತೃತ್ವದಲ್ಲಿ ದುರ್ಗಾ ನವಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿತ್ತು.
2000 ವರ್ಷಕ್ಕೂ ಹಿಂದೆ ಸ್ತ್ರೀ ರಕ್ಷಣೆ ಹಾಗೂ ಸಮಾಜದಲ್ಲಿ ಹೆಣ್ಣುಮಕ್ಕಳ ಜಾಗೃತಿಗಾಗಿ ಮಾಡಿದ್ದರೆನ್ನಲಾದ ನವಚಂಡಿಕಾ ಯಾಗಕ್ಕೆ ಬಹಳಷ್ಟು ಮಹತ್ವವಿದೆ. ಕೊಲ್ಲೂರು ದೇವಳದ ಪ್ರಧಾನ ಅರ್ಚಕ ಮಂಜುನಾಥ ಅಡಿಗ, ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ, ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಸ್ವಾಮೀಜಿ,
ಬಾಳೇಕುದ್ರುವಿನ ನರಸಿಂಹಾಶ್ರಮ ಸ್ವಾಮೀಜಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಮಾತಾನಂದಮಯೀ, ಕರಿಂಜ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ, ಕೊಲ್ಲೂರು ಧರ್ಮಪೀಠದ ಸ್ವಾಮೀಜಿ, ಸಾಧ್ವಿ ಗೀತಾನಂದಿನಿ, ಮರವೂರು ನಿತ್ಯಾನಂದಾಶ್ರಮ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಧರ್ಮ ವ್ರತಾನಂದ ಸ್ವಾಮೀಜಿ, ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ ಮುಂತಾದವರು ಉಪಸ್ಥಿತಿಯಿದ್ದರು.
ಮಹಿಳೆಯರಿಂದಲೇ ನಡೆದ ಯಾಗ:
ದಕ್ಷಿಣ ಭಾರತದಲ್ಲೇ ಮೊದಲ ಬಾರಿ ನಡೆದಿರುವ ನವಚಂಡಿಕಾ ಯಾಗದ ಯಾಗಶಾಲೆಗೆ ಮಹಿಳೆಯರು ಮಾತ್ರ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಮಹಿಳೆಯರು ಯಾಗದ ಪೂರ್ಣಾಹುತಿ ನಡೆಯುವ ತನಕ ಯಾಗಶಾಲೆಯಲ್ಲೇ ಉಪಸ್ಥಿತಿಯಿದ್ದರೆ ಪುರುಷರಿಗೆ ಒಳಪ್ರವೇಶಿಸಲು ಅವಕಾಶವಿರಲಿಲ್ಲ. ಮಹಿಳೆಯರಿಂದಲೇ ನಡೆದ ಯಾಗ ವಿಶೇಷವಾಗಿತ್ತಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮಹಿಳೆಯರು, ಹೆಣ್ಮಕ್ಕಳು ಯಾಗಕ್ಕೆ ಸಾಕ್ಷಿಯಾದರು.
`ಸೌಜನ್ಯಳಂಥ ಮುಗ್ಧ ಹೆಣ್ಮಕ್ಕಳ ಬಲಿ ನಿಲ್ಲಲಿ’
-ಮಹೇಶ್ ಶೆಟ್ಟಿ, ತಿಮರೋಡಿ
`ಧರ್ಮಸ್ಥಳದಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಪಾಂಗಳ ನಿವಾಸಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಇಲ್ಲಿಯತನಕ ನ್ಯಾಯ ಸಿಕ್ಕಿಲ್ಲ. ಆಕೆಯ ಹೆತ್ತವರು ನ್ಯಾಯಕ್ಕಾಗಿ ಹೋರಾಡುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಆಕೆಯ ಸಾವಿನ ದಿನದಂದು ಹೆಣ್ಣುಮಕ್ಕಳ ರಕ್ಷಣೆ ಮತ್ತು ಜಾಗೃತಿಗಾಗಿ ನವಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದೆ. ಸೌಜನ್ಯಳಿಗೆ ಒದಗಿಬಂದ ಸ್ಥಿತಿ ಬೇರೆ ಹೆಣ್ಣುಮಕ್ಕಳಿಗೆ ಬರಬಾರದು. ಮುಗ್ಧ ಹೆಣ್ಮಕ್ಕಳ ಅತ್ಯಾಚಾರ, ದೌರ್ಜನ್ಯ, ಕೊಲೆಯಂಥ ಘಟನೆಗಳು ಸಮಾಜದಲ್ಲಿ ಇನ್ನುಮುಂದೆ ನಡೆಯಬಾರದು. ಇದಕ್ಕಾಗಿ 2000 ವರ್ಷಗಳ ಬಳಿಕ ಇಂಥದ್ದೊಂದು ಯಾಗವನ್ನು ನಡೆಸಲಾಗುತ್ತಿದೆ.’
ನವಚಂಡಿಕಾ ಯಾಗ ಅಭೂತಪೂರ್ವ ಯಶಸ್ಸು ಕಂಡಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿತ್ತು. ದಕ್ಷಿಣ ಭಾರತದಲ್ಲೇ ನಡೆದಿರುವ ಮೊದಲ ಯಾಗ ಇದಾಗಿರುವ ಕಾರಣ ಬೆಳ್ತಂಗಡಿ ತಾಲೂಕು ಮಾತ್ರವಲ್ಲದೆ ಸುತ್ತಲಿನ ಹತ್ತೂರ ಜನರು ಸ್ವಯಂಪ್ರೇರಿತರಾಗಿ ಆಗಮಿಸಿ ಯಾಗದಲ್ಲಿ ಪಾಲು ಪಡೆದರು. ಸೌಜನ್ಯ ಹೆತ್ತವರು ಯಾಗದಲ್ಲಿ ಪಾಲ್ಗೊಂಡು ತಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.










