ಕೋಲಾರ: ಕರೋನಾ ವಿರುದ್ದದ ಹೋರಾಟದಲ್ಲಿ ವೈದ್ಯರು, ಆರೋಗ್ಯಸಿಬ್ಬಂದಿ, ಪೊಲೀಸರು, ಕಂದಾಯ ಇಲಾಖೆ ನೌಕರರ ಜತೆ ಪತ್ರಕರ್ತರು ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್ ತಿಳಿಸಿದರು.
ಗುರುವಾರ ನಗರದ ಪತ್ರಕರ್ತರ ಭವನದಿಂದ ಅಕ್ಕಿ ಹಾಗೂ ಎಪಿಎಂಸಿಯಿಂದ ತಲಾ 20 ಕೆಜಿ ವಿವಿಧ ತರಕಾರಿ ಕಿಟ್ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.ವಿಶ್ವಕ್ಕೆ ಮಾರಿಯಾಗಿರುವ ಕರೋನಾ ತಡೆಯುವಲ್ಲಿ ಪ್ರತಿಯೊಬ್ಬರ ಸಹಕಾರವೂ ಅಗತ್ಯವಿದೆ, ಅದಕ್ಕೂ ಮುನ್ನ ಜನತೆಗೆ ಜಾಗೃತಿ ಮೂಡಿಸುವ ಅಗತ್ಯವೂ ಹೆಚ್ಚಿದ್ದು, ಈ ಕಾರ್ಯದಲ್ಲಿ ಪತ್ರಕರ್ತರೊ ತೊಡಗಿಸಿಕೊಂಡಿದ್ದಾರೆ, ಇಂತಹ ಲಾಕ್ ಡೌನ್ ಸಂಕಷ್ಟದಲ್ಲಿ ಅವರಿಗೆ ನೆರವಾಗುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದರು.
ಕರೋನಾ ಮಾರಿಯಿಂದಾಗಿ ಲಾಕ್ಡೌನ್ ಆಗಿರುವುದರಿಂದ ಕಷ್ಟದ ಪರಿಸ್ಥಿತಿ ನಗರದಲ್ಲಿ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಇದೆ ಎಂದು ತಿಳಿಸಿದ ಅವರು, ಉಳ್ಳವರು ಉದಾರ ಮನಸ್ಸಿನಿಂದ ನೆರವು ನೀಡಲು ಮುಂದೆ ಬರಬೇಕು ಎಂದು ಕೋರಿದ ಅವರು, ಜನಪ್ರತಿನಿಧಿಗಳು ಎಪಿಎಂಸಿಯಿಂದ ತರಕಾರಿಯನ್ನು ಖರೀದಿಸಿ ಅವರ ಕ್ಷೇತ್ರಗಳ ಜನರಿಗೆ ಉಚಿತವಾಗಿ ಹಂಚುವ ಕಾರ್ಯಕ್ಕೆ ಪ್ರೇರಣೆ ನೀಡಿದ್ದೇ ಪತ್ರಕರ್ತರು ಎಂದರು.
ಇದರಿಂದಾಗಿ ಕೋಲಾರ ಸಂಸದರು ಸೇರಿದಂತೆ ಬೆಂಗಳೂರಿನ ಬೈರತಿ ಬಸವರಾಜ್ ಸೇರಿದಂತೆ ಅನೇಕರು ಕೋಲಾರ ಎಪಿಎಂಸಿಯಿಂದ ತರಕಾರಿ ಖರೀದಿಸುತ್ತಿರುವುದರಿಂದ ಬೆಳೆಗೆ ಬೆಲೆಯಿಲ್ಲದೇ ಸಂಕಷ್ಟದಲ್ಲಿದ್ದ ರೈತರಿಗೆ ಉತ್ತಮ ಬೆಲೆ ಬಂದು ನಿಟ್ಟುಸಿರು ಬಿಡುವಂತಾಗಿದ್ದು ಇದಕ್ಕಾಗಿ ಪತ್ರಕರ್ತರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಹೊರರಾಜ್ಯಗಳಿಗೆ ತರಕಾರಿ ಸಾಗಿಸುತ್ತಿರುವ ಲಾರಿ ಚಾಲಕರಿಗೆ ಕರೋನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ, ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಮಾಡಿಯೇ ಒಳ ಬಿಡಲಾಗುತ್ತಿದೆ ಎಂದು ನಾಗರಾಜ್ ತಿಳಿಸಿದರು.
ಪತ್ರಕರ್ತರಿಗೂಕರೋನಾ ಟೆಸ್ಟ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಮಹಾರಾಷ್ಟ್ರದಲ್ಲಿ ಕರೋನಾ ಟೆಸ್ಟ್ ಸಂದರ್ಭದಲ್ಲಿ 53 ಪತ್ರಕರ್ತರಿಗೆ ಸೋಂಕು ದೃಢಪಟ್ಟಿರುವುದರಿಂದ ಇಲ್ಲಿಯೂ ಪತ್ರಕರ್ತರಿಗೆ ಪರೀಕ್ಷೆ ಮಾಡಲು ಕೋರಲಾಗಿದ್ದು, ನಾಳೆಯಿಂದಲೇ ದಿನಕ್ಕೆ 15 ಮಂದಿ ಪತ್ರಕರ್ತರು ಜಿಲ್ಲಾಸ್ಪತ್ರೆಗೆ ಹೋಗಿ ಪರೀಕ್ಷೆಗೆ ಒಳಗಾಗಲು ಮನವಿಮಾಡಿದರು.
ಪತ್ರಕರ್ತರಿಗೆ ಜಿಲ್ಲಾಡಳಿತದಿಂದ 5 ಕೆಜಿ ಅಕ್ಕಿ ಜತೆಗೆ ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್ ಅವರು 20 ಕೆಜಿ ತರಕಾರಿ ನೀಡಲು ಮುಂದೆ ಬಂದಿದ್ದು, ಅವರಿಗೆ ಧನ್ಯವಾದ ಸಲ್ಲಿಸುತ್ತಿರುವುದಾಗಿ ತಿಳಿಸಿದರು.ಸಂಘದ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಸ್ವಾಗತಿಸಿ, ಹೊರರಾಜ್ಯಗಳಿಗೆ ತರಕಾರಿ ಕೊಂಡೊಯ್ಯುವ ರೈತರು,ಲಾರಿ ಚಾಲಕರು,ಕ್ಲೀನರ್ಗಳಿಗೆ ಕರೋನಾ ಟೆಸ್ಟ್ ಕಡ್ಡಾಯಗೊಳಿಸಲು ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಎಲ್ಲಾ ಪತ್ರಕರ್ತರು ಹಾಜರಿದ್ದರು.
